ಭಯದಿಂದ ಕೋರ್ಟಿಗೆ ಹೋಗಿಲ್ಲ, ಗೌರವ ಕಳೆಯೋ ಸಂದರ್ಭದಲ್ಲಿ ರಕ್ಷಣೆಯ ಅಗತ್ಯವಿದೆ: ನಾರಾಯಣ ಗೌಡ

Public TV
2 Min Read

– ಮಸೆದಿರೊ ಕತ್ತಿಯಿಂದ ರಕ್ಷಣೆಗಾಗಿ ಕೋರ್ಟಿಗೆ ಹೋಗ್ಬೇಕಾಯಿತು

ಮಂಡ್ಯ: ಭಯ-ಭೀತಿಯಿಂದ ಕೋರ್ಟಿಗೆ ಹೋಗಿಲ್ಲ. ಗೌರವ ಕಳೆಯುವ ಸಂದರ್ಭದಲ್ಲಿ ರಕ್ಷಣೆ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಕೋರ್ಟ್ ಮೊರೆ ಹೋಗಿರುವುದಾಗಿ ಸಚಿವ ನಾರಾಯಣ ಗೌಡ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಢಿದ ಅವರು, ಗೌರವ ಹಾಗೂ ಕುಟುಂಬದವರಿಗೆ ನೋವಾಗುವ ಪ್ರಶ್ನೆ ಇದು. ಸಚಿವರು ಮಾತ್ರ ಅಲ್ಲ, ರಾಜಕಾರಣಿಗಳೆಲ್ಲಾ ಕೋರ್ಟ್ ಗೆ ಹೋಗುತ್ತಾರೆ. ಗೌರವ ಕಳೆಯುವ ಸಂದರ್ಭದಲ್ಲಿ ರಕ್ಷಣೆ ತೆಗೆದುಕೊಳ್ಳಬೇಕಾಗುತ್ತದೆ. ಸಿಡಿ ಇದೆ ಎಂದೇಳುವುದು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಸಿಡಿ ಇದ್ದರೆ ತಂದು ತೋರಲಿ, ಸತ್ಯಾಂಶ ತಿಳಿಸಲಿ. ಸುಮ್ಮನೆ ಅವರದಿದೆ, ಇವರದಿದೆ ಎಂದೇಳಿ ಫೋಟೋ ಹಾಕಿ ಗೌರವ ಕಳೆಯುವುದು ಸರಿಯಲ್ಲ. ಇದನ್ನೆಲ್ಲ ತಡೆಹಿಡಿಯಲು ಕೋರ್ಟ್ ಹೋಗಿದ್ದೇವೆ ಎಂದು ತಿಳಿಸಿದರು.

ಚಿಕ್ಕಚಿಕ್ಕ ಮೀಡಿಯಾಗಳು, ಸೋಷಿಯಲ್ ಮೀಡಿಯಾಗಳು ಪಿತೂರಿ ಮಾಡಿ ಗೌರವ ಕಳೆಯುವ ಕೆಲಸ ಮಾಡುತ್ತಿವೆ. ಸತ್ಯಾಂಶ ಇಲ್ಲದೆ ಇವೆಲ್ಲವನ್ನೂ ತೋರಬಾರದು ಎಂದು ಕೋರ್ಟ್ ಮೊರೆ ಹೋಗಿದ್ದೇವೆ. ನಮಗೆ ನ್ಯಾಯ ಸಿಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ಹೆಸರು ಇಲ್ಲದೆ ಯಾರದೋ ಫೋಟೋ ಹಾಕಿ ಸುದ್ದಿ ಮಾಡಲಾಗುತ್ತಿದೆ. ಅದಕ್ಕೋಸ್ಕರ ಕೋರ್ಟ್ ಹೋಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ದಿನೇಶ್ ಬಳಿ ಇನ್ನೂ ಕೆಲ ಸಚಿವರ ಸಿಡಿ ಇದೆ ಎಂಬ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಆತ ದೊಡ್ಡ ಮನುಷ್ಯ ಆಗಲಿ, ಆತನಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೇಗ ಬೇಗ ಬಿಟ್ಟುಬಿಡಪ್ಪ ತಡ ಯಾಕೆ..? ಕೋರ್ಟಿಗೆ ಯಾರು ಹೋಗಲ್ಲ. ಮಸೆದಿರೊ ಕತ್ತಿಯಿಂದ ರಕ್ಷಣೆಗಾಗಿ ಕೋರ್ಟಿಗೆ ಹೋಗಬೇಕಾಯಿತು. ಸತ್ಯಾಂಶನ ನೀವು ಮುಚ್ಚಿಡಿ ಅಂತ ನಾವು ಕೇಳ್ತಿಲ್ಲ. ರಕ್ಷಣೆಗಾಗಿ ನಾವು ಕೋರ್ಟ್ ಗೆ ಹೋಗಿದ್ದೀವಿ ಅದ್ರಲ್ಲಿ ತಪ್ಪೇನಿದೆ. ಸತ್ಯಾಂಶ ಗೊತ್ತಾಗುತ್ತಲ್ವಾ ಈಗ. ಸತ್ಯಾಂಶ ಯಾರದ್ದಿದೆ ಅದನ್ನ ಬಿಡಿ ಹೊರಗಡೆ ಎಂದರು.

ಮಾಜಿ ಸಚಿವರ ಸಿಡಿ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಅದು ಅವರ ವೈಯಕ್ತಿಕ ವಿಚಾರ. ಅದಕ್ಕನೂ ಅವರು ಕೋರ್ಟ್ ನಿಂದ ತಡೆ ತಂದಿದ್ದಾರೆ. ಸಿನಿಮಾಗಳಲ್ಲಿ ಒಬ್ಬ ಬೆಟ್ಟದ ಮೇಲಿಂದ ನೆಗೆಯುತ್ತಾನೆ. ಆತನ ಕೈ ಕಾಲುಗಳನ್ನ ಮುರಿದುಕೊಳ್ತಾನೆ. ಆತ ಏನು ನಿಜವಾಗಲೂ ಬೀಳ್ತಾನಾ..? ಅದೇ ರೀತಿಯಲ್ಲಿ ಇಲ್ಲೂ ನಡೆದಿರಬಹುದು. ವೀಡಿಯೋ ಗ್ರಾಫಿಕ್ಸ್ ಇದ್ದರೂ ಇರಬಹುದು. ರಾಜಕಾರಣದಲ್ಲಿ ನಮ್ಮನ್ನ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದ್ರೂ ಮಾಡಿರಬಹುದು. ಸತ್ಯಾಂಶ ಹೊರ ಬಂದೇ ಬರುತ್ತದೆ ಎಂದು ಹೇಳಿದರು.

ನರ್ವಸ್ ಆಗಿದ್ದಿದ್ರೆ ನಾನು ಮಂಡ್ಯಗೆ ಬರ್ತಿರಲಿಲ್ಲ. ನನ್ನನ್ನ ಬಾಂಬೆ ಕಳ್ಳ ಅಂತ ಯಾಕ್ ಕರೀತಾರೆ. ನಾನು ಮುಂಬೈನಲ್ಲಿ 32 ವರ್ಷ ಇದ್ದೆ. ನನ್ನ ಮೇಲೆ ಅಲ್ಲಿ ನೀವು ಮುಂಬೈಗೆ ಹೋಗಿ ಪರಿಶೀಲಿಸಿ. ಕಳ್ಳತನ, ಲೂಟಿ, ಚೆಕ್ ಬೌನ್ಸ್ ಯಾವುದೇ ಒಂದೇ ಒಂದು ದೂರು ದಾಖಲಾಗಿದ್ರೆ ನಾನು ರಾಜಕೀಯ ನಿವೃತ್ತಿ ರಾಜಕಾರಣ ತ್ಯಾಗ ಮಾಡ್ತಿನಿ. ಬಾಂಬೆ ಕಳ್ಳ ಅಂದ್ರೆ ಅರ್ಥ ಏನು..? ಬಾಂಬೆ ಕಳ್ಳ ಅಂತ ಯಾಕೆ ಕರೀತಿದ್ದೀರಿ ಎಂದು ಯಾರಾದ್ರು ಕೇಳಿದ್ದೀರಾ ಎಂದು ಪ್ರಶ್ನಿಸಿದರು. ಇದೇ ವೇಳೆ ಪತ್ರಕರ್ತರೊಬ್ಬರು ಬಾಂಬೆ ಕಳ್ಳ ಅನ್ನೋರ ಮೇಲೆ ಮಾನಹಾನಿ ಕೇಸ್ ಹಾಕಬಹುದಲ್ಲಾ ಸರ್ ಅಂದಾಗ ಸಚಿವರು, ಎಷ್ಟು ಕೇಸ್ ಹಾಕೋದು ಈಗ ರಕ್ಷಣೆಗಾಗಿ ಹಾಕಿರುವ ಒಂದು ಕೇಸನ್ನೇ ತಾವು ತಡ್ಕೊಳಕ್ಕಾಗ್ತಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *