ಮಾರ್ಚ್ 1 ರಿಂದ ಹಿರಿಯ ನಾಗರಿಕರಿಗೆ ಉಚಿತ ಕೊರೊನಾ ಲಸಿಕೆ – ಕೇಂದ್ರ ಸರ್ಕಾರ

Public TV
2 Min Read

ನವದೆಹಲಿ: ಹಿರಿಯ ನಾಗರಿಕರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟ 2ಕ್ಕಿಂತ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಸರ್ಕಾರ ತಿಳಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಕಾಶ್ ಜಾವಡೇಕರ್, ಮಾರ್ಚ್ 1ರಿಂದ ಹಿರಿಯ ನಾಗರಿಕರಿಗೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಎರಡರಲ್ಲೂ ಲಸಿಕೆ ಪಡೆಯಬಹುದಾಗಿದ್ದು, 45 ವರ್ಷ ಮೇಲ್ಪಟ್ಟವರು ತಮಗೆ 2ಕ್ಕಿಂತ ಹೆಚ್ಚು ಕಾಯಿಲೆಗಳು ಇರುವ ಬಗ್ಗೆ ಸರ್ಟಿಫಿಕೇಟ್ ತೋರಿಸಿ ಲಸಿಕೆ ಪಡೆಯಬಹುದಾಗಿದೆ ಎಂದು ಹೇಳಿದರು.

ಸುಮಾರು 10 ಸಾವಿರಕ್ಕೂ ಅಧಿಕ ಸರ್ಕಾರಿ ಕೇಂದ್ರಗಳು, 20 ಸಾವಿರಕ್ಕೂ ಅಧಿಕ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ವ್ಯಾಕ್ಸಿನ್ ಪಡೆಯಬಹುದಾಗಿದ್ದು, ಖಾಸಗಿ ಕೇಂದ್ರಗಳಲ್ಲಿ ಪಡೆಯುವವರು ಹಣ ಪಾವತಿಸಬೇಕಾಗುತ್ತದೆ. ಒಂದು ಡೋಸ್‍ಗೆ ಎಷ್ಟು ಹಣ ನೀಡಬೇಕು ಎಂಬುದನ್ನು ಎರಡ್ಮೂರು ದಿನಗಳಲ್ಲಿ ತಿಳಿಸಲಾಗುವುದು. ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದರು.

ಜನವರಿ 16ರಿಂದ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ವಿತರಣಾ ಪ್ರಕ್ರಿಯೆ ಆರಂಭವಾಗಿದ್ದು, ಆರಂಭದಲ್ಲಿ ಆರೋಗ್ಯ ಸಿಬ್ಬಂದಿ ಬಳಿಕ ಮುಂಚೂಣಿಯಲ್ಲಿರುವ ಸರ್ಕಾರಿ ಸಿಬ್ಬಂದಿಗೆ ಲಸಿಕೆ ನೀಡಲಾಗಿತ್ತು. ಈಗ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ 2ಕ್ಕೂ ಹೆಚ್ಚು ಖಾಯಿಲೆಯಿಂದ ನರಳುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ.

ಆರಂಭದಲ್ಲಿ 50 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು. ಬಳಿಕ ವಯಸ್ಸಿನ ಅಂತರವನ್ನು 60 ವರ್ಷಕ್ಕೆ ಹೆಚ್ಚಿಸಲಾಗಿದೆ. 60 ವರ್ಷ ಮೇಲ್ಪಟ್ಟವರು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬೇಕಾದಲ್ಲಿ ಕೋ-ವಿನ್ ಆ್ಯಪ್ ಕಡ್ಡಾಯವಾಗಿ ಇರಬೇಕು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *