ಕಾಂಗ್ರೆಸ್ ನಾಯಕಿಯಿಂದ ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ದೇಣಿಗೆ!

Public TV
1 Min Read

ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜನ ದೇಣಿಗೆ ನೀಡುತ್ತಿದ್ದಾರೆ. ಅಂತೆಯೇ ಇದೀಗ ಕಾಂಗ್ರೆಸ್ ನಾಯಕಿಯೊಬ್ಬರು ಭಾರೀ ಮೊತ್ತದ ದೇಣಿಗೆ ನೀಡಿ ಸುದ್ದಿಯಾಗಿದ್ದಾರೆ.

ಹೌದು. ಉತ್ತರ ಪ್ರದೇಶದ ರಾಯ್ ಬರೇಲಿ ಕಾಂಗ್ರೆಸ್ ಶಾಸಕಿ ಆದಿತಿ ಸಿಂಗ್ ಅವರು ರಾಮ ಮಂದಿರ ನಿರ್ಮಾಣಕ್ಕೆ 51 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಣವನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಜ್ ಅವರಿಗೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆಯಾಗಿ ನೀಡುವುದಾಗಿ ಅವರು ತಿಳಿಸಿದ್ದಾರೆ.

ಶಾಸಕಿ ಆದಿತಿ ಸಿಂಗ್ ಅವರು ಹಲವು ಸನ್ನಿವೇಶಗಳಲ್ಲಿ ಕಾಂಗ್ರೆಸ್ ವಿರುದ್ಧವೇ ಗುಡುಗಿದ್ದರು. ಈ ಹಿಂದೆ ಸೋನಿಯಾ ಗಾಂಧಿಯವರನ್ನೇ ಅದಿತಿ ಅವರು ತರಾಟೆಗೆ ತೆಗೆದುಕೊಂಡಿದ್ದರು. ರಾಯ್ ಬರೇಲಿಗೆಯಿಂದ ಈ ಹಿಂದೆ ಗೆದ್ದಿದ್ದ ಸೋನಿಯಾ ಗಾಂಧಿ ಐದು ವರ್ಷಗಳ ಅವಧಿಯಲ್ಲಿ ಕೇವಲ ಎರಡು ಬಾರಿ ಮಾತ್ರ ರಾಯಬರೇಲಿಗೆ ಆಗಮಿಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಗೋರಕ್ಷ್ ಪೀಠದ ಪೀಠಾಧೀಶ್ವರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ದೇವಾಲಯ ನಿರ್ಮಾಣಕ್ಕಾಗಿ 1.01 ಕೋಟಿ ರೂ. ಚೆಕ್ ಅನ್ನು ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿದ್ದರು. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಣಿಗೆ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಕೋವಿಂದ್ ಅವರು 5 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಅವರು ದೇಶದ ಮೊದಲ ಪ್ರಜೆ. ಹೀಗಾಗಿ ನಾವು ಈ ಅಭಿಯಾನವನ್ನು ಆರಂಭಿಸುವ ಮೊದಲು ಅವರ ಬಳಿಯೇ ತೆರಳಿದ್ದೆವು. ಈ ವೇಳೆ ಅವರು 5,01,000 ರೂ.ಗಳನ್ನು ನೀಡಿದ್ದಾರೆ ಎಂದು ವಿಎಚ್‍ಪಿಯ ಅಲೋಕ್ ಕುಮಾರ್ ತಿಳಿಸಿದ್ದರು. ಈ ಬೃಹತ್ ಅಭಿಯಾನ ಫೆಬ್ರವರಿ 27ರ ವರೆಗೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *