ಹೆಚ್.ಡಿ ದೇವೇಗೌಡ್ರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

Public TV
3 Min Read

– ಪ್ರತಿಭಟನಾ ನಿರತ ರೈತರಿಗೆ ಚರ್ಚೆಗೆ ಆಹ್ವಾನ
– ರೈತರ ಒಳಿತಿಗಾಗಿ ಈ ನಿರ್ಧಾರ

ನವದೆಹಲಿ: ಮಾಜಿ ಪ್ರಧಾನಿ ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಈಗಾಗಲೇ ಕೇಂದ್ರದ ಕಾನೂನು ವಿರುದ್ಧ ಹೋರಾಟ ಮಾಡುತ್ತಿರುವ ರೈತರಿಗೆ ಪ್ರತಿಭಟನೆ ನಿಲ್ಲಿಸುವಂತೆ ಮೋದಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಅವರು, ಭಾರತ ಮುಂದುವರಿಯಲು ಬಡತನದಿಂದ ಮುಕ್ತವಾಗಬೇಕು. ಈ ಹಿನ್ನೆಲೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಮೊದಲ ಬಾರಿ, ಎರಡನೇ ಬಾರಿ ಆಯ್ಕೆಯಾದಾಗಲೂ ನಮ್ಮ ಮೊದಲ ಭಾಷಣದಲ್ಲಿ ಇದನ್ನೇ ಹೇಳಿದ್ದೆವು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಹತ್ತು ಕೋಟಿ ಶೌಚಾಲಯ ನಿರ್ಮಿಸಿದೆ. ಏಳು ಕೋಟಿ ಉಚಿತ ಗ್ಯಾಸ್ ಕನೆಕ್ಷನ್ ನೀಡಿದೆ. ಐದು ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಕೋಟಿಗೂ ಅಧಿಕ ಮನೆ ಕಟ್ಟಿಸಿ ಕೊಟ್ಟಿದೆ. ಸಾಕಷ್ಟು ಅಭಿವೃದ್ಧಿ ಪರ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ರೈತರ ಪ್ರತಿಭಟನೆ ವಿಚಾರ ಪ್ರಸ್ತಾಪಿಸಿದ ಪ್ರಧಾನಿ, ಕೃಷಿ ಮಂತ್ರಿಗಳು ಈ ಬಗ್ಗೆ ಚರ್ಚೆ ಮಾಡಿದ್ದಾರೆ. ದೇವೇಗೌಡರು ಈ ಚರ್ಚೆ ಗಂಭೀರತೆ ತಂದು ಕೊಟ್ಟಿದ್ದಾರೆ. ಅವರು ಒಳ್ಳೆಯ ಸಲಹೆಗಳನ್ನು ನೀಡಿದ್ದಾರೆ. ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದರು.

ಹಿಂದಿನ ಸರ್ಕಾರಗಳು ಸಣ್ಣ ರೈತರ ಬಗ್ಗೆ ಕಾಳಜಿ ವಹಿಸಿಲ್ಲ. ನಾವು ಸಣ್ಣ ಸಣ್ಣ ರೈತರ ಬಗ್ಗೆ ಚಿಂತಿಸಿದ್ದೇವೆ. ಫಸಲ್ ಭೀಮಾ ಯೋಜನೆ ಜಾರಿಗೆ ತಂದಿದೆ. 90 ಸಾವಿರ ಕೋಟಿ ರೈತರಿಗೆ ನೀಡಿದೆ. ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ನೀಡುತ್ತಿದ್ದೇವೆ. ಮೀನುಗಾರರಿಗೂ ಇದರ ಲಾಭ ನೀಡಿದ್ದೇವೆ. ಯೂರಿಯಾ ಗೊಬ್ಬರ ಸರಳವಾಗಿ ಸಿಗುವಂತೆ ಮಾಡಿದೆ. ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆ ಜಾರಿಗೆ ತಂದಿದೆ. ಹತ್ತು ಕೋಟಿ ಕುಟುಂಬಗಳಿಗೆ ನೀಡಿದೆ. ಬಂಗಾಳದ ಜನರನ್ನು ಸೇರಲು ಬಿಟ್ಟಿಲ್ಲ. ಇಲ್ಲದಿದ್ದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿತ್ತು ಎಂದು ತಿಳಿಸಿದರು.

ಈವರೆಗೂ ಒಂದು ಲಕ್ಷದ 15 ಸಾವಿರ ಕೋಟಿ ಸರ್ಕಾರ ನೀಡಿದೆ. ರೈತರಿಗೆ ಪಿಂಚಣಿ ವ್ಯವಸ್ಥೆ ಮಾಡಿದೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ ಜಾರಿ ತಂದಿದೆ. ಇದು ಬರೀ ರಸ್ತೆಯಲ್ಲ ಗ್ರಾಮೀಣ ಬದುಕು ಬದಲಿಸುತ್ತದೆ. ಕೃಷಿ ಉತ್ಪನ್ನಗಳ ಸಹಕಾರವಾಗಿದೆ. ಕಿಸಾನ್ ಉಡಾನ್ ಮೂಲಕವೂ ಬೆಳೆಗಳ ಸಾಗಾಟಕ್ಕೆ ವ್ಯವಸ್ಥೆ ಮಾಡಿದೆ ಎಂದು ಪ್ರಧಾನಿ ಹೇಳಿದರು.

ಕೃಷಿ ವಿಚಾರದಲ್ಲೂ ಬದಲಾವಣೆ ಬಹಳ ಮುಖ್ಯ. ಬದಲಾವಣೆಯೊಂದಿಗೆ ನಾವು ಮುಂದುವರಿಯಬೇಕು. ಬದಲಾವಣೆ ಆದರೆ ಅಭಿವೃದ್ಧಿ ಸಾಧ್ಯ. ಕೃಷಿ ವಲಯದಲ್ಲಿ ಬದಲಾವಣೆಗಳು ಆಗಿಲ್ಲ. ನಿಂತಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ನಾವು ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕು ಎಂದ ಪ್ರಧಾನಿಯವರು ಕಾಂಗ್ರೆಸ್‍ಗೆ ಠಕ್ಕರ್ ನೀಡಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ಉಲ್ಲೇಖಿಸಿ ತಿರುಗೇಟು ನೀಡಿದ ಮೋದಿ, ಕೃಷಿ ಕ್ಷೇತ್ರದ ಬದಲಾವಣೆಗಳ ಬಗ್ಗೆ ಹಿಂದೆ ಮನಮೋಹನ್ ಸಿಂಗ್ ಮಾತನಾಡಿದ್ದರು. ಅದೇ ಹೇಳಿಕೆಯನ್ನು ಪ್ರಸ್ತಾಪಿಸಿ ಸಿಂಗ್ ಮಾತನ್ನು ನಾವು ಜಾರಿ ಮಾಡುತ್ತಿದ್ದೇವೆ ಎಂದು ಮೋದಿ ವ್ಯಂಗ್ಯವಾಡಿದರು.

ಕೃಷಿ ಸಚಿವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಮಾತುಕತೆ ಒಮ್ಮತಕ್ಕೆ ಬಂದಿಲ್ಲ. ನಾವು ಮಾತುಕತೆಗೆ ಸಿದ್ಧವಿದ್ದೇವೆ. ಕೂತು ಚರ್ಚೆ ಮಾಡಿ ಉತ್ತಮ ನಿರ್ಧಾರ ತೆಗೆದುಕೊಳ್ಳೋಣ. ಪ್ರತಿಭಟನೆ ಅಂತಿಮಗೊಳಿಸಿ ಚರ್ಚೆಗೆ ಬನ್ನಿ. ಒಮ್ಮೆ ಈ ಕಾನೂನುಗಳ ಜಾರಿಗೆ ಅವಕಾಶ ನೀಡಿ. ಇದು ಹೇಗೆ ಕ್ರಾಂತಿ ತರಲಿದೆ ನೋಡಿ. ಒಂದು ವೇಳೆ ಕಾನೂನು ಸರಿಯಾಗಿ ಇಲ್ಲದ್ದರೇ ಬದಲಾವಣೆ ಮಾಡಲು ಎಂಎಸ್‍ಪಿ ಇರಲಿದೆ. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಜನಸಂಖ್ಯೆ ಹೆಚ್ಚಳದಿಂದ ಕೃಷಿ ಭೂಮಿ ಕಡಿಮೆ ಆಗ್ತಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಈ ಕಾನೂನುಗಳು ಬೇಕು. ಇದರಲ್ಲಿ ರಾಜಕೀಯ ಮಾಡುವುದು ಬೇಡ. ರೈತರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೋದಿ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *