ಚೆನ್ನೈ: ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಆಸ್ಟ್ರೇಲಿಯಾ ಸರಣಿಯಲ್ಲಿ ತನ್ನ ಬೌಲಿಂಗ್ ದಾಳಿಯಿಂದ ಆಸ್ಟ್ರೇಲಿಯದ ಬ್ಯಾಟ್ಸ್ಮ್ಯಾನ್ ಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ ಭಾರತದ ಭವಿಷ್ಯದ ಭರವಸೆಯ ವೇಗಿ ಟಿ. ನಟರಾಜನ್ ತನ್ನ ಮುಡಿಯನ್ನು ದೇವರಿಗೆ ಕೊಟ್ಟು ಹರಕೆ ತಿರಿಸಿಕೊಂಡಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಹಾಗೂ ಟಿ20 ಕ್ರಿಕೆಟ್ನಲ್ಲಿ ನಟರಾಜನ್ ತನ್ನ ಯಾರ್ಕರ್ ಬೌಲಿಂಗ್ ಮೂಲಕ ಆಸ್ಟ್ರೇಲಿಯಾದಲ್ಲಿ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಸರಣಿಯನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗೂ ಮುಂಚೆ ತಾನು ಭಾರತ ತಂಡಕ್ಕೆ ಆಯ್ಕೆಯಾದರೆ ಮುರುಗಸ್ವಾಮಿಗೆ ತಲೆಯ ಮುಡಿ ಕೊಡುವುದಾಗಿ ಹರಕೆ ಹೇಳಿಕೊಂಡಿದ್ದರು. ಇದರಂತೆ ನಟರಾಜನ್ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ನಟರಾಜನ್ ಮಧುರೈ ಜಿಲ್ಲೆಯ ಪಳನಿಯ ದಂಡಾಯುಧಪಾಣಿ ದೇವಸ್ಥಾನದಲ್ಲಿರುವ ಮುರುಗಸ್ವಾಮಿಯ ದರ್ಶನ ಮಾಡಿ ಹರಕೆಯ ಪ್ರಕಾರ ತಲೆ ಬೋಳಿಸಿ ಮುಡಿಕೊಟ್ಟಿದ್ದಾರೆ.
ನಟರಾಜನ್ ಶಿವಗಿರಿ ಪರ್ವತದಲ್ಲಿರುವ ರೋಪ್ ಕಾರ್ ಮೂಲಕ ದೇವಸ್ಥಾನ ಪ್ರವೇಶಿಸಿದರು. ದೇವಾಲಯಕ್ಕೆ ಬರುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡಿತ್ತು. ನಟರಾಜನ್ ಬರುತ್ತಿದ್ದಂತೆ ಅಭಿಮಾನಿಗಳು ದೇವಸ್ಥಾನದಲ್ಲಿ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇತ್ತ ನಟರಾಜನ್ ಭಕ್ತಿಯಿಂದ ದೇವರಿಗೆ ಹರಕೆ ಪೂರೈಸಿ ಸಂತಸ ಪಟ್ಟರು.

 
			

 
		 
		
 
                                
                              
		