ಲಸಿಕೆ ತೆಗೆದುಕೊಳ್ಳಲು ವೈದ್ಯರು, ನರ್ಸ್‍ಗಳು ವಿರೋಧಿಸಿದ್ರೂ ಉತ್ತರಕನ್ನಡ ಜಿಲ್ಲೆ ರಾಜ್ಯಕ್ಕೆ ಮಾದರಿ!

Public TV
2 Min Read

ಕಾರವಾರ: ರಾಜ್ಯ ಸರ್ಕಾರ ಜನವರಿ 16 ರಂದು ಕೊರೊನಾ ಲಸಿಕೆಯನ್ನು ಕೊರೊನಾ ವಾರಿಯರ್ಸ್ ಗಳಿಗೆ ಮೊದಲು ನೀಡಲು ಪ್ರಾರಂಭ ಮಾಡಿತು. ಆದರೆ ಜನರಿಗೆ ಧೈರ್ಯ ತುಂಬಬೇಕಾದ ವೈದ್ಯರು ಮತ್ತು ನರ್ಸ್ ಗಳೇ ಕೊರೊನಾ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯರು, ನರ್ಸ್ ಸೇರಿದಂತೆ ಒಟ್ಟು 14,655 ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಪಟ್ಟಿ ಮಾಡಿತ್ತು. ಇದರಲ್ಲಿ 9,689 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. 4,966 ಜನ ತೆಗೆದುಕೊಳ್ಳುವುದು ಬಾಕಿ ಇದ್ದು, 311 ಮಂದಿ ಗರ್ಭಿಣಿ ಹಾಗೂ ಇತರೆ ರೋಗ ಕಾರಣಗಳಿಗೆ ನೀಡಲಾಗಿಲ್ಲ. 9 ಜನರಿಗೆ ಜಿಲ್ಲೆಯಲ್ಲಿ ಲಸಿಕೆ ಪಡೆದ ನಂತರ ತಲೆ ಸುತ್ತುವ ಹಾಗೂ ಜ್ವರದ ಚಿಕ್ಕಪುಟ್ಟ ಪರಿಣಾಮ ಬಿಟ್ಟರೆ ಲಸಿಕೆಯ ಅಡ್ಡಪರಿಣಾಮ ಆಗಿಲ್ಲ. 4,655 ಜನರು ತೆಗೆದುಕೊಳ್ಳಬೇಕಿದ್ದು ಇದರಲ್ಲಿ ವೈದ್ಯರು, ನರ್ಸ್ ಗಳು, ಆಯುಷ್ ಇಲಾಖೆ ವೈದ್ಯರು, ಖಾಸಗಿ ಆಸ್ಪತ್ರೆ ಸಿಬ್ಬಂದಿ ಸೇರಿದ್ದಾರೆ. ಆದರೆ ಇವರಲ್ಲಿ ಕಡ್ಡಾಯವಲ್ಲದ ಕಾರಣ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

ಈ ಕುರಿತು ಮಾತನಾಡಿದ ಆರ್‍ಸಿಹೆಚ್‍ಓ ರಮೇಶ್, ಶೇ.50 ವೈದ್ಯರು, ನರ್ಸುಗಳು ಅದರಲ್ಲೂ ಖಾಸಗಿ ಆಸ್ಪತ್ರೆಯವರೇ ಹೆಚ್ಚಾಗಿ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇವರ ಮನಪರಿವರ್ತನೆ ಮಾಡಲು ಇಲಾಖೆ ಪ್ರಯತ್ನ ನಡೆಸುತ್ತಿದೆ. ಲಸಿಕೆಯಿಂದ ಯಾವುದೇ ಸಮಸ್ಯೆಗಳು ಹೆಚ್ಚಿನದಾಗಿಲ್ಲ. ಲಸಿಕೆಯಿಂದ ಯಾವುದೇ ತೊಂದರೆ ಆಗದು. ರಾಜ್ಯದಲ್ಲಿ ಲಸಿಕೆ ನೀಡುವಲ್ಲಿ ನಾಲ್ಕನೇ ಸ್ಥಾನ ಉತ್ತರ ಕನ್ನಡ ಜಿಲ್ಲೆಗೆ ಸಂದಿದೆ. ಉಳಿದ ನಾಲ್ಕು ಸಾವಿರ ಜನರಿಗೂ ಲಸಿಕೆ ನೀಡುತ್ತೇವೆ. ಸದ್ಯ ಜಿಲ್ಲೆಯಲ್ಲಿ ಮೊದಲ ಹಂತವಾಗಿ 7500 ಲಸಿಕೆಗಳು ಬಂದಿದ್ದವು. ನಂತರ ಎರಡನೇ ಹಂತದಲ್ಲಿ 7,500 ಲಸಿಕೆ ಬಂದಿದೆ. ನಮ್ಮ ಬೇಡಿಕೆ 15 ಸಾವಿರ ಲಸಿಕೆಯದ್ದಾಗಿತ್ತು. ಆದರೆ ಯಾವುದೇ ತೊಂದರೆ ಆಗದಂತೆ ಲಸಿಕೆಯನ್ನು ಸರ್ಕಾರ ನೀಡಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯದ ವೈದ್ಯರು, ನರ್ಸ್ ಗಳಿಗೆ ಕೌನ್ಸ್ ಲಿಂಗ್ ಮೂಲಕ ಮನಪರಿವರ್ತನೆಗೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ. ಈ ಕುರಿತು ಭಯ ಬಿಡುವಂತೆ ಜಾಗೃತಿ ಪ್ರಯತ್ನ ಸಾಗಿದೆ. ಆದರೂ ಜಿಲ್ಲೆಯು ರಾಜ್ಯದಲ್ಲೇ ಅತೀ ಹೆಚ್ಚು ವ್ಯಾಕ್ಸಿನ್ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *