ಸಾರಿಗೆ ನೌಕರರ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧ: ಲಕ್ಷ್ಮಣ್ ಸವದಿ

Public TV
2 Min Read

-ಸರ್ಕಾರದಿಂದ ನೌಕರರ ಸಂಬಳಕ್ಕಾಗಿ 1,746 ಕೋಟಿ ನೆರವು

ಹುಬ್ಬಳ್ಳಿ : ಕೊರೊನಾ ಲಾಕ್ ಡೌನ್‍ನಿಂದಾಗಿ ಸಾರಿಗೆ ಇಲಾಖೆಯ ನಾಲ್ಕು ವಿಭಾಗದಿಂದ 3700 ಕೋಟಿ ನಷ್ಟ ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯ 1.30 ಲಕ್ಷ ನೌಕರಿಗೆ ತೊಂದರೆಯಾಗಬಾರದು ಎಂದು, ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರ ಸಂಬಳಕ್ಕಾಗಿ 1,746 ಕೋಟಿ ನೆರವು ನೀಡಲಾಗಿದೆ. ನೌಕರರ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಕಲಘಟಗಿ ನೂತನ ಬಸ್ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾರಿಗೆ ಸಚಿವನಾಗಿ ಅಧಿಕಾರಿ ಸ್ವೀಕರಿಸದ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ನಷ್ಟದ ಪ್ರಮಾಣ 3000 ಕೋಟಿ ಇತ್ತು. ಸರ್ಕಾರದಿಂದ 2980 ಕೋಟಿ ಬರುವುದು ಬಾಕಿ ಇತ್ತು. ಇದರೊಂದಿಗೆ ಅನೀರಿಕ್ಷಿತ ಕೊರೊನಾ ಲಾಕ್ ಡೌನ್‍ನಿಂದಾಗಿ ನಷ್ಟದ ಪ್ರಮಾಣ ಹೆಚ್ಚಾಗಿದೆ. ಲಾಕ್ ಡೌನ್ ನಂತರ ಸಾರಿಗೆ ಸಂಚಾರ ಪುನಃ ಪ್ರಾರಂಭಿಸಲಾಗಿದೆ. ಪ್ರತಿದಿನ 1 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಲಾಕ್ ಡೌನ್ ಪ್ರಾರಂಭಕ್ಕೂ ಮುನ್ನ 4.20 ಕೋಟಿ ಜನರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ಸಂಖ್ಯೆ ಇಳಿಕೆಯಿಂದಾಗಿ ಸಾರಿಗೆ ಆದಾಯ ಕುಂಠಿತವಾಗಿದೆ ಎಂದರು.

 

ಇನ್ನೂ ಸಂಸ್ಥೆಯ 2,000 ಬಸ್‍ಗಳು 9 ಲಕ್ಷಕ್ಕೂ ಹೆಚ್ಚು ದೂರ ಕ್ರಮಿಸಿದ್ದು, ಅವುಗಳನ್ನು ನಿಷ್ಕ್ರಿಯ ಗೊಳಿಸಲಾಗುವುದು. ಹಳೆ ಬಸ್ ಗಳನ್ನು ಗುಜರಿಯವರಿಗೆ ಹರಾಜು ಮಾಡದೆ ಸಾರ್ವಜನಿಕ ಸ್ಥಳಗಳಲ್ಲಿ ಬಸ್ ಗಳನ್ನು ಬಳಸಿ ಸುಸಜ್ಜಿತ ಶೌಚಾಲಯ, ಸ್ನಾನ ಗೃಹಗಳನ್ನು ನಿರ್ಮಿಸಲಾಗುವುದು. ನೌಕರರು ಯಾರದೋ ಮಾತು ಕೇಳಿ ಪ್ರತಿಭಟನೆಗೆ ಇಳಿಯಬಾರದು. ಇಲಾಖೆ ಕಾರ್ಮಿಕರ ಹಿತರಕ್ಷಣೆಗೆ ಬದ್ದವಾಗಿದೆ. ಅಧಿಕಾರಿಗಳಿಂದ ಕೆಳ ಹಂತದ ನೌಕರರಿಗೆ ಉಂಟಾಗುವ ಕಿರುಕುಳ ತಪ್ಪಿಸಬೇಕು. ವರ್ಗಾವಣೆ ನಿಯಮಗಳನ್ನು ಬದಲಿಸಲಾಗುವುದು. ವಾ.ಕ.ರ.ಸಾ.ಸಂಸ್ಥೆ ನಿವೃತ್ತಿ ನೌಕರರ ಉಪದಾನ ನಗದೀಕರಣ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲು ಅಲ್ಪಾವಧಿ ಸಾಲ ಪಡೆಯುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಸೂಚಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಅಂತರ ನಿಗಮ ವರ್ಗಾವಣೆ ಬಗ್ಗೆ ಸರಳ ನಿಯಮ ರೂಪಿಸಬೇಕು. ಪತಿ ಪತ್ನಿ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ ವರ್ಗಾವಣೆ ಮಾಡಬೇಕು. ಸುರಕ್ಷಿತ ಪ್ರಯಾಣ ಕೇಂದ್ರ ಸರ್ಕಾರದ ಗುರಿಯಾಗಿದೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ 80 ಸಾವಿರ ಕೋಟಿ ರೂಪಾಯಿಗಳ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 1.25 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದರಲ್ಲಿ 3200 ಕಿ.ಮೀ.ಗ್ರಾಮೀಣ ರಸ್ತೆ ನಿರ್ಮಿಸಲಾಗುವುದು. ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಅವಳಿ ನಗರದಲ್ಲಿ ಬೇಂದ್ರೆ ಬಸ್ ಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರಿಗೆ ಸಂಸ್ಥೆಗೆ ಪ್ರತಿ ತಿಂಗಳು 20 ಕೋಟಿ ರೂ. ನಷ್ಟವಾಗುತ್ತಿದೆ. ಸಾರಿಗೆ ಸಚಿವರು ಖಾಸಗಿ ಬಸ್ ಗಳ ಹಾವಳಿಯನ್ನು ತಡೆಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ ಓಡಾಟ ಹೆಚ್ಚಿಸಬೇಕು ಎಂದರು.

ವಾಯುವ್ಯ ಕಾರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಕೆ. ಸವದಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *