5 ವಿಕೆಟ್ ಪಡೆದು ಮಿಂಚಿದ ಸಿರಾಜ್- ಭಾರತಕ್ಕೆ 328 ರನ್‍ಗಳ ಗುರಿ

Public TV
1 Min Read

ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯಾಟದ ಎರಡನೇ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ಕಿತ್ತು ಸಿರಾಜ್ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹಾಕಿದ್ದು, ಭಾರತಕ್ಕೆ 328 ರನ್‍ಗಳ ಗುರಿಯನ್ನು ಆಸೀಸ್ ನೀಡಿದೆ.

ಭಾರತದ ಪರ ತನ್ನ ಮೊದಲ ಸರಣಿಯನ್ನು ಆಡಲು ಆಸ್ಟ್ರೇಲಿಯಾಗೆ ಬಂದಿದ್ದ ಸಿರಾಜ್‍ಗೆ ಆಸ್ಟ್ರೇಲಿಯಾ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿ ಅವಮಾನಿಸಿದ್ದರು. ಆದರೆ ಅದನ್ನೆಲ್ಲ ಬದಿಗೊತ್ತಿ ತನ್ನ ಆಟದ ಮೂಲಕ ಇದೀಗ ಸಿರಾಜ್ ಆಸ್ಟ್ರೇಲಿಯಾ ತಂಡಕ್ಕೆ ಮತ್ತು ಅಲ್ಲಿನ ಪ್ರೇಕ್ಷಕರಿಗೆ ದಿಟ್ಟ ಉತ್ತರ ನೀಡಿದ್ದಾರೆ.

ಕೊನೆಯ ಟೆಸ್ಟ್ ಪಂದ್ಯದ 4ನೇ ದಿನ ಬ್ಯಾಟಿಂಗ್ ಮುಂದುವರೆಸಿದ ಆಸ್ಟ್ರೇಲಿಯಾ ಭಾರತದ ನಿಖರ ದಾಳಿಯ ಎದುರು 75.5 ಓವರ್‍ಗಳಲ್ಲಿ 294 ರನ್‍ಗಳಿಗೆ ಆಲೌಟ್ ಆಯಿತು. ಭಾರತದ ಪರ ಮೊಹಮ್ಮದ್ ಸಿರಾಜ್ 73ರನ್ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಸಿರಾಜ್ ತನ್ನ ಜೀವನ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ್ದಾರೆ. ಇವರಿಗೆ ಉತ್ತಮ ಸಾತ್ ನೀಡಿದ ಶಾರ್ದೂಲ್ ಠಾಕೂರ್ 61ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಇನ್ನೊಂದು ವಿಕೆಟ್ ಡೆಬ್ಯು ಪ್ಲೇಯರ್ ವಾಷಿಂಗ್ಟನ್ ಸುಂದರ್ ಪಾಲಾಯಿತು.

ಗೆಲ್ಲಲು 328 ರನ್‍ಗಳ ಗುರಿ ಪಡದ ಭಾರತ ಬ್ಯಾಟಿಂಗ್ ಆರಂಭಿಸಿದಾಗ ಮಳೆ ಅಡ್ಡಿ ಪಡಿಸಿದೆ. ದಿನದಾಟದ ಮುಕ್ತಾಯದ ವೇಳೆಗೆ ಭಾರತದ ಪರ ರೋಹಿತ್ ಶರ್ಮಾ 4ರನ್ (6 ಎಸೆತ) ಮತ್ತು ಶುಭಮನ್ ಗಿಲ್ 5 ಎಸೆತ ಎದುರಿಸಿ ಯಾವುದೇ ರನ್‍ಗಳಿಸದೆ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೂ ಭಾರತಕ್ಕೆ ಗೆಲ್ಲಲು 324 ರನ್‍ಗಳ ಅವಶ್ಯಕತೆ ಇದ್ದು ಐದನೇ ದಿನದಾಟದಲ್ಲೂ ಮಳೆಯ ಅಡಚಣೆಯ ಭೀತಿ ಕಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *