ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ನೀಡಿದ ರಾಷ್ಟ್ರಪತಿ ಕೋವಿಂದ್

Public TV
1 Min Read

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ವೈಯಕ್ತಿಕವಾಗಿ 5 ಲಕ್ಷ ರೂ.ಗಳನ್ನು ನೀಡುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಣಿಗೆ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಕೋವಿಂದ್ ಅವರು 5 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.

ಅವರು ದೇಶದ ಮೊದಲ ಪ್ರಜೆ. ಹೀಗಾಗಿ ನಾವು ಈ ಅಭಿಯಾನವನ್ನು ಆರಂಭಿಸುವ ಮೊದಲು ಅವರ ಬಳಿಯೇ ತೆರಳಿದ್ದೆವು. ಈ ವೇಳೆ ಅವರು 5,01,000 ರೂ.ಗಳನ್ನು ನೀಡಿದ್ದಾರೆ ಎಂದು ವಿಎಚ್‍ಪಿಯ ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ಬೃಹತ್ ಅಭಿಯಾನವನ್ನು ಇಂದಿನಿಂದ ಆರಂಭಿಸಲಾಗಿದ್ದು, 2022ರ ಫೆಬ್ರವರಿ 27ರ ವರೆಗೆ ನಡೆಯಲಿದೆ.

ದೇಶದ ಪ್ರಾಚೀನ ನಿರ್ಮಾಣ ತಂತ್ರಗಳನ್ನು ಗಮನದಲ್ಲಿರಿಸಿಕೊಂಡು ಮಂದಿರದ ವಿಶಿಷ್ಟ ರಚನೆಯನ್ನು ನಿರ್ಮಿಸಲಾಗಿದೆ. ಬಿರುಗಾಳಿ, ಭೂಕಂಪ ಹಾಗೂ ಇತರೆ ನೈಸರ್ಗಿಕ ವಿಪತ್ತುಗಳಿಗೆ ಬಗ್ಗದಂತೆ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ ಎಂದು ಟ್ರಸ್ಟ್ ತಿಳಿಸಿದೆ.

ಅಭಿಯಾನ ಆರಂಭವಾಗುತ್ತಿದ್ದಂತೆ ಸಿಕ್ಕಿಂ ರಾಜ್ಯಪಾಲ ಗಂಗಾ ಪ್ರಸಾದ್ ಅವರು ಸಹ 1.01 ಲಕ್ಷ ರೂ.ಗಳನ್ನು ನೀಡಿದ್ದಾರೆ. ಟ್ರಸ್ಟ್ ನ ರಾಜ್ಯ ಮಟ್ಟದ ಸಮಿತಿ ರಾಜ್ಯಪಾಲ ಗಂಗಾ ಪ್ರಸಾದ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಅಭಿಯಾನದ ಕುರಿತು ತಿಳಿಸಿದೆ. ಈ ವೇಳೆ 1.01 ಲಕ್ಷ ರೂ.ಗಳನ್ನು ಅವರು ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 5 ರಂದು ಭೂಮಿ ಪೂಜೆ ನೆರವೇರಿಸಿದ್ದರು. ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಕುಟುಂಬದ ಒಂದು ಇಟ್ಟಿಗೆ ಇರಲಿ. ರಾಮ ಮಂದಿರ ರಾಷ್ಟ್ರೀಯ ಮಂದಿರವಾಗಲಿದೆ. ರಾಮ ಮಂದಿರ ನಿರ್ಮಾಣವೂ ಸಾರ್ವಜನಿಕರ ಸಹಾಯದಿಂದ ನೆರವೇರುತ್ತಿರುವುದು ಪುಣ್ಯ. ಅಳಿಲು ಸೇವೆ ಮಾಡುವ ಭಾಗ್ಯ ನಮಗಿದೆ ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *