ಎಸ್ ಟಿ ಮೀಸಲಾತಿಗೆ ಆಗ್ರಹ – ನಾಳೆ ಕಾಗಿನೆಲೆಯ ಕನಕ ಗುರುಪೀಠದ ಪೀಠಾಧ್ಯಕ್ಷರ ನೇತೃತ್ವದಲ್ಲಿ ಪಾದಯಾತ್ರೆ

Public TV
1 Min Read

ಹಾವೇರಿ: ಎಸ್‍ಟಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭಗೊಂಡಿದೆ. ಇನ್ನೊಂದು ಕಡೆ ನಾಳೆಯಿಂದ ಎಸ್ ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಕಾಗಿನೆಲೆಯ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ.

ಕನಕಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಾಳೆ ಕಾಗಿನೆಲೆ ಮೂಲಕ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಯಲಿದೆ. ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಯಲಿದೆ.

ನಾಳೆಯಿಂದ ಆರಂಭವಾಗುತ್ತಿರುವ ಈ ಪಾದಯಾತ್ರೆ ಫೆಬ್ರುವರಿ 7ರವರೆಗೆ ನಡೆಯಲಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಕುರುಬರ ಜಾಗೃತಿ ಸಮಾವೇಶ ನಡೆಯಲಿದೆ. ಸ್ವಾಮೀಜಿ ನೇತೃತ್ವದಲ್ಲಿ ಪ್ರತಿದಿನ ಇಪ್ಪತ್ತು ಕಿ.ಮೀ ಪಾದಯಾತ್ರೆ ನಡೆಯಲಿದ್ದು, ಬೆಳಿಗ್ಗೆ ಹತ್ತು ಕಿ.ಮೀ ಮತ್ತು ಸಂಜೆ ವೇಳೆಯಲ್ಲಿ ಹತ್ತು ಕಿ.ಮೀ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆ ಉದ್ದಕ್ಕೂ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಜಾಗೃತಿ ಸಭೆ ನಡೆಯಲಿವೆ. ಈಗಾಗಲೇ ಪಾದಯಾತ್ರೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಪಾದಯಾತ್ರೆಯಲ್ಲಿ ಪ್ರತಿದಿನ ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಪಾದಯಾತ್ರೆಗೂ ಮುನ್ನ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಕನಕಗುರುಪೀಠದ ಆವರಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಕುರುಬ ಸಮುದಾಯದ ಜನರು ಭಾಗವಹಿಸಲಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಆರ್.ಶಂಕರ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ, ಬಂಡೆಪ್ಪ ಕಾಶೆಂಪೂರ ಸೇರಿದಂತೆ ಸಮುದಾಯದ ಸಚಿವರು ಮತ್ತು ಶಾಸಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ಪ್ರಸಾದ ಸೇವನೆ ಮಾಡಿ ಸಂಜೆ ನಾಲ್ಕು ಗಂಟೆ ವೇಳೆಗೆ ಮತ್ತೆ ಪಾದಯಾತ್ರೆ ಆರಂಭವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *