ಮುಂಬೈ: ಚಲಿಸುತ್ತಿದ್ದ ರೈಲಿನಿಂದ 26 ವರ್ಷದ ಪತ್ನಿಯನ್ನ ಪತಿಯೇ ಹೊರಕ್ಕೆ ದೂಡಿ ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಸೋಮವಾರ ಚೆಂಬೂರು ಮತ್ತು ಗೋವಂಡಿ ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ. ಸದ್ಯ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದ್ದು, ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
ಈ ಜೋಡಿ ಘಟನೆ ವೇಳೆ ರೈಲಿನ ಬಾಗಿಲ ತುದಿಯಲ್ಲಿ ನಿಂತಿದ್ದರು. ಇಬ್ಬರು ಕೂಲಿ ಮಾಡುತ್ತಿದ್ದು, 2 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಸೋಮವಾರ ಆರೋಪಿ ಈ ಹಿಂದೆ ಮದುವೆಯಾಗಿದ್ದ ತನ್ನ 7 ವರ್ಷದ ಮಗಳು ಹಾಗೂ ಪತ್ನಿಯೊಂದಿಗೆ ಮುಂಬೈನ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿದ್ದಾನೆ. ಈ ವೇಳೆ ರೈಲಿಗೆ ಅಂಟಿಕೊಂಡಿದ್ದ ಕಂಬವನ್ನು ಹಿಡಿದು ಇಬ್ಬರು ರೈಲಿನ ಬಾಗಿಲ ಬಳಿ ನಿಂತಿದ್ದರು. ಆಗ ಮಹಿಳೆ ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದಾಗ ಆಕೆಯ ಪತಿ ಬಾಗಿಲ ಬಳಿ ಆಕೆಯ ಕೈಯನ್ನು ಹಿಡಿದು ನಂತರ ಅವಳ ಕೈ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ದಂಪತಿ ಚಟುವಟಿಕೆಯನ್ನು ಗಮನಿಸುತ್ತಿದ್ದ ಮಹಿಳೆಯೊಬ್ಬಳು ಗೋವಂಡಿ ನಿಲ್ದಾಣದಲ್ಲಿ ರೈಲು ನಿಂತಾಗ ಕೆಳಗಿಳಿದು ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ರೈಲು ನಿಲ್ದಾಣದಿಂದ ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆತನ ಪತ್ನಿ ಸ್ಥಳದಲ್ಲಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಹಿಳೆ ದಾರಿ ಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.