ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸಲು ಚಾಲಕರಿಗೆ ಸೂಚನೆ ನೀಡಿ – ಸವದಿಗೆ ಸುರೇಶ್‍ಕುಮಾರ್ ಪತ್ರ

Public TV
1 Min Read

ಬೆಂಗಳೂರು: ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸಲು ಚಾಲಕರು, ನಿರ್ವಾಹಕರಿಗೆ ಸೂಚನೆ ನೀಡಿ ಎಂದು ಸಾರಿಗೆ ಸಚಿವ ಮತ್ತು ಡಿಸಿಎಂ ಲಕ್ಷ್ಮಣ ಸವದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಶಾಲಾ-ಕಾಲೇಜುಗಳು ಪ್ರಾರಂಭವಾಗಿವೆ. ರಾಜ್ಯದ ವಿವಿಧೆಡೆಯ ಗ್ರಾಮಾಂತರ ಪ್ರದೇಶಗಳಲ್ಲಿ ಬಸ್‍ಗಳು ವಿದ್ಯಾರ್ಥಿಗಳಿಗೆ ನಿಲ್ಲಿಸದೇ ತೊಂದರೆ ಕೊಡುತ್ತಿವೆ. ಕೆಲ ಚಾಲಕರು ಮತ್ತು ನಿರ್ವಾಹಕರು ವಿದ್ಯಾರ್ಥಿಗಳಿಗೆ ಅಸಹಕಾರ ಕೊಡುತ್ತಿದ್ದಾರೆ. ಹೀಗಾಗಿ ಚಾಲಕರು ಮತ್ತು ನಿರ್ವಾಹಕರಿಗೆ ಸೂಕ್ತ ನಿರ್ದೇಶನ ಕೊಡಬೇಕು ಎಂದು ಸಚಿವರ ಪರವಾಗಿ ವಿಶೇಷ ಕರ್ತವ್ಯಾಧಿಕಾರಿ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?
ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ಹೊರಟು ನಿಂತಾಗ ರಾಜ್ಯದ ವಿವಿಧೆಡೆಯ ಗ್ರಾಮಾಂತರ ಪ್ರದೇಶಗಳ ಅನೇಕ ಬಸ್ ನಿಲ್ದಾಣಗಳಲ್ಲಿ ಬಸ್ ಗಳನ್ನು ನಿಲ್ಲಿಸದೇ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳ ಕೆಲವು ಚಾಲಕರು /ನಿರ್ವಾಹಕರು ವಿದ್ಯಾರ್ಥಿಗಳ ಕುರಿತು ಅವಜ್ಞೆ ತೋರುತ್ತಿರುವುದು ಕಂಡುಬರುತ್ತಿದೆ.

ನಾನು ಕಳೆದ ಶನಿವಾರ ತುಮಕೂರು ಜಿಲ್ಲೆಯ ಪ್ರವಾಸದಲ್ಲಿರುವಾಗ ಪಿನಗಾನಹಳ್ಳಿ ಮಾರ್ಗದ ಬಸ್ಸೊಂದು ನಿಲುಗಡೆ ಕಡ್ಡಾಯವಾಗಿದ್ದರೂ ಸಹ ಬಸ್ ನಿಲ್ಲದಿದ್ದಾಗ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದು ನನ್ನ ಗಮನಕ್ಕೆ ಬಂತು. ಆ ಬಸ್ ಚಾಲಕ/ನಿರ್ವಾಹಕರಿಗೆ ಬಸ್ ನಿಲ್ಲಿಸದಿದ್ದರೆ ಮಕ್ಕಳಿಗೆ ಆಗುವ ತೊಂದರೆ ಕುರಿತು ಮನದಟ್ಟು ಮಾಡಿದೆ.

ವಿದ್ಯಾರ್ಥಿಗಳನ್ನು ಬಸ್ ಚಾಲಕ/ನಿರ್ವಾಹಕರು ಅವಜ್ಞೆ ಮಾಡದೇ ಮತ್ತು ಮಕ್ಕಳು ಶಾಲಾಕಾಲೇಜಿಗೆ ಹೋಗಿ ಬರಲು ತೊಂದರೆಯಾಗದಂತೆ ಸಹಾನುಭೂತಿಯಿಂದ ವರ್ತಿಸುವಂತೆ ಚಾಲಕ/ನಿರ್ವಾಹಕರಿಗೆ ನಿರ್ದೇಶನ ನೀಡಬೇಕೆಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಮಾನ್ಯ ಸಚಿವರ ಪತ್ರದ ಪ್ರತಿಯನ್ನು ಲಗತ್ತಿಸಿದ್ದು, ಪ್ರಕಟಣೆಗೆ ಸ್ವೀಕರಿಸಬೇಕೆಂದು ತಮ್ಮನ್ನು ಕೋರಲು ಮಾನ್ಯ ಸಚಿವರಿಂದ ನಿರ್ದೇಶಿತನಾಗಿದ್ದೇನೆ.

Share This Article
Leave a Comment

Leave a Reply

Your email address will not be published. Required fields are marked *