ಅನಿರೀಕ್ಷಿತ ಕಾರ್ಯಾಚರಣೆ- ನಾಲ್ಕು ಬಾಲಕಾರ್ಮಿಕರು ಪತ್ತೆ

Public TV
1 Min Read

ಹಾವೇರಿ: ಬಾಲಕಾರ್ಮಿಕರ ಪತ್ತೆಗಾಗಿ ಗುರುವಾರ ನಗರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ನಾಲ್ಕು ಜನ ಬಾಲ ಕಾರ್ಮಿಕರನ್ನು ಪತ್ತೆಮಾಡಿ, ರಕ್ಷಿಸಲಾಗಿದೆ.

ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಅವರ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕೃಷಿ ಉತ್ಪನ್ನ ಮಾರುಕಟ್ಟೆ ಮಾರ್ಗದಲ್ಲಿ ವಿವಿಧ ಅಂಗಡಿಗಳು, ಬಾರ್, ಹೋಟೆಲ್‍ಗಳ ತಪಾಸಣೆ ನಡೆಸಲಾಗಿದೆ. ಈ ಮಾರ್ಗದಲ್ಲಿ ನ್ಯೂ ಚಿಕನ್ ಕಾರ್ನರ್ ಹೋಟೆಲ್, ಸ್ಪೇಷಲ್ ಧಾರವಾಡ ಪೇಡಾ ಬಿಗ್ ಬೇಕರಿ, ಕಿರಾಣಿ ಅಂಗಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಲಕರನ್ನು ಪತ್ತೆಮಾಡಿ ವಶಕ್ಕೆ ಪಡೆಯಲಾಯಿತು.

ಇದೇ ಮಾರ್ಗದಲ್ಲಿ ಕೇಂದ್ರ ಬಸ್ ನಿಲ್ದಾಣದ ಸಮೀಪ ಕಡಲೆಗಿಡ ಮಾರುತ್ತಿದ್ದ ಬಾಲಕನನ್ನು ವಶಕ್ಕೆ ಪಡೆಯಲಾಯಿತು. ಈ ನಾಲ್ಕು ಬಾಲಕರು 15 ವರ್ಷದ ವಯೋಮಿತಿಯವರಾಗಿದ್ದು, ಜಿಲ್ಲೆಯ ಬೇರೆ ಹಳ್ಳಿಗಳಿಂದ ಬಂದು ನಗರದಲ್ಲಿ ಕೆಲಸಮಾಡುತ್ತಿದ್ದರು.

ಪತ್ತೆಯಾದ ಬಾಲಕರ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ್ ಅವರು ಬಾಲಕರ ಊರು, ವಿಳಾಸ, ಪಾಲಕರ ಬಗ್ಗೆ ಮಾಹಿತಿ ಪಡೆದರು. ಎಲ್ಲ ಮಕ್ಕಳು ವ್ಯಾಸಂಗಮಾಡುತ್ತಿರುವ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಾಲಕರ ಮಾಹಿತಿ ಆಧರಿಸಿ ಸ್ಥಳದಲ್ಲೇ ಶಾಲಾ ಮುಖ್ಯೋಪಾಧ್ಯಾಯರಿಗೆ ದೂರವಾಣಿ ಕರೆಮಾಡಿ, ಬಾಲಕರ ಮನೆಗೆ ತೆರಳಿ, ಪಾಲಕರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವಂತೆ ಸೂಚನೆ ನೀಡಿದರು.

ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಅಗತ್ಯವಿದ್ದರೆ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶಾವಕಾಶ ಕಲ್ಪಿಸುವುದು ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ದೊರಕಿಸಿಕೊಡುವಂತೆ ಸೂಚನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *