ರಾಜ್ಯದಲ್ಲಿ ಇನ್ನೂ 4 ದಿನ ಮಳೆ – ಮಂಗಳೂರು, ಉಡುಪಿಯಲ್ಲಿ ರಾತ್ರಿ ಅವಾಂತರ

Public TV
2 Min Read

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದೆ. ಇಂದು ಮೋಡ ಕವಿದ ವಾತಾವರಣ ಮನೆ ಮಾಡಿದ್ದು, ತುಂತುರ ಮಳೆಯಾಗುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಿದೆ.

4 ದಿನ ಗುಡುಗು ಸಿಡಿಲು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಕೊಡಗು ಜಿಲ್ಲೆಯ ಹಲವೆಡೆಯೂ ಮಳೆ ಸುರಿದಿದೆ. ಸುಂಟಿಕೊಪ್ಪ ಸುತ್ತಮುತ್ತ ಸುರಿಯುತ್ತಿರುವ ಅಕಾಲಿಕ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕಾಫಿ ಮತ್ತು ಭತ್ತದ ಬೆಳೆಗೆ ಮಳೆಯಿಂದ ಹಾನಿಯಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.

ರಾಜ್ಯದ 9 ಜಿಲ್ಲೆಗಳಲ್ಲಿ ನಿನ್ನೆ ತುಂತುರು ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಅಕಾಲಿಕ ಮಳೆಯಾಗಿದೆ. ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಸುರತ್ಕಲ್, ಮುಲ್ಕಿಯಲ್ಲಿ ಸಿಡಿಲು ಮಿಂಚಿನೊಂದಿಗೆ ಮಳೆಯಾಗಿದೆ. ಉಡುಪಿಯ ಬ್ರಹ್ಮಾವರದಲ್ಲಿ ಆಕಾಶವಾಣಿ ಸಮೀಪವಿರುವ ಸಪ್ತಮಿ ಹೊಟೇಲ್‍ಗೆ ಸಿಡಿಲು ಬಡಿದಿದ್ದು, ಸಂಪೂರ್ಣ ಭಸ್ಮವಾಗಿದೆ. ರೆಫ್ರಿಜರೇಟರ್‍ನ ಕಂಪ್ರೇಸರ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳ ತಾಲೂಕಿನ ಕೆಲವೆಡೆ ಮಿಂಚು, ಗುಡುಗು ಸಹಿತ ಮಳೆಯಾಗಿದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿ ಮೊದಲು ಮಳೆ ಆರಂಭಗೊಂಡಿದ್ದು ಹೆಬ್ರಿ ತಾಲೂಕಿನ ಸೋಮೇಶ್ವರ ಅಜೆಕಾರು ಮುನಿಯಾಲು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಕಾರ್ಕಳ, ಬ್ರಹ್ಮಾವರದಲ್ಲೂ ತುಂತುರು ಮಳೆ ಮುಂದುವರಿದಿದೆ.

ಅಕಾಲಿಕ ಮಳೆಗೆ ಬೆಂಗಳೂರಿನಲ್ಲಿ ಹಲವು ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ತಿಲಕ್ ನಗರದ ಸಾಗರ್ ಅಪೋಲೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ವೆಂಕಟೇಶ್ (41) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿದ್ದರು.

ಇನ್ನು ಬೆಂಗಳುರಿನಲ್ಲಿ ಇಂದು ಕೂಡ ತುಂತುರು ಮಳೆಯಾಗುತ್ತಿದ್ದು, ಕೆಲವೆಡೆ ಮರಗಳು ನೆಲಕ್ಕುರುಳಿವೆ. ತುಂತುರು ಮಳೆಯಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರರೆ.

ಎಲ್ಲೆಲ್ಲಿ ಎಷ್ಟು ಮಳೆ…!
ರಾಜಾಜಿನಗರ : 15.5 ಮೀ.ಮೀ
ಅರಕೆರೆ: 15.5 ಮೀ.ಮೀ
ದಯಾನಂದ ನಗರ: 14.5 ಮೀ.ಮೀ
ಕೊಟ್ಟಿಗೆಪಾಳ್ಯ: 13.5 ಮೀ.ಮೀ
ಸಂಪಂಗಿರಾಮನಗರ: 13. ಮೀ.ಮೀ
ಮಾರುತಿ ಮಂದಿರ: 12. ಮೀ.ಮೀ
ಬಿಟಿಎಂ ಲೇಔಟ್: 12. ಮೀ.ಮೀ
ನಾಗರಭಾವಿ: 12 ಮೀ.ಮೀ

Share This Article
Leave a Comment

Leave a Reply

Your email address will not be published. Required fields are marked *