ಹುಡುಗನಿಗೆ ವಯಸ್ಸು ಆಗದೇ ಇದ್ರೂ ವಯಸ್ಕ ದಂಪತಿ ಜೊತೆಯಲ್ಲಿರಬಹುದು: ಹೈಕೋರ್ಟ್‌

Public TV
2 Min Read

ಚಂಡೀಗಢ: ಹುಡುಗನಿಗೆ ಮದುವೇ ವಯಸ್ಸು ಆಗದಿದ್ದರೂ ವಯಸ್ಕ ದಂಪತಿ ಒಟ್ಟಿಗೆ ಜೀವಿಸಬಹುದು ಎಂದು ಪಂಜಾಬ್‌ ಹರ್ಯಾಣ ಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿದೆ.

ವಯಸ್ಕ ದಂಪತಿ ಕಾನೂನಿನ ವ್ಯಾಪ್ತಿಯ ಒಳಗಡೆ ತಮ್ಮ ಜೀವನವನ್ನು ನಡೆಸುವ ಎಲ್ಲ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾ. ಅಲ್ಕಾ ಸರೀನ್‌ ಅಭಿಪ್ರಾಯಪಟ್ಟಿದ್ದಾರೆ.

ಒಬ್ಬ ವ್ಯಕ್ತಿ ಹೇಗೆ ಬದುಕಬೇಕು ಎಂಬುದನ್ನು ಸಮಾಜ ನಿರ್ಧರಿಸಲು ಸಾಧ್ಯವಿಲ್ಲ. ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೆ ಜೀವನದ ಹಕ್ಕನ್ನು ನೀಡಿದೆ. ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವು ಜೀವನದ ಹಕ್ಕಿನ ಒಂದು ಪ್ರಮುಖ ಭಾಗ. ಈ ಪ್ರಕರಣದಲ್ಲಿ ಹುಡುಗನ ವಿವಾಹದ ವಯಸ್ಸು ಮೀರದೇ ಇದ್ದರೂ ಮಗಳು ಆತನ ಜೊತೆ ಒಟ್ಟಿಗೆ ಜೀವಿಸಬಾರದು ಎಂದು ಪೋಷಕರು ಆಕೆಯ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ಪೀಠ ಹೇಳಿದೆ.

ಕೋರ್ಟ್‌ ಫತೇಘರ್‌ ಪೊಲೀಸರಿಗೆ ಈ ದಂಪತಿಗೆ ಕಾನೂನಿನ ಪ್ರಕಾರ ರಕ್ಷಣೆ ನೀಡಬೇಕೆಂದು ಸೂಚಿಸಿದೆ.

ಏನಿದು ಪ್ರಕರಣ?
19 ವರ್ಷದ ಯುವತಿ ಮತ್ತು 20 ವರ್ಷದ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಚಾರ ತಿಳಿದು ಯುವತಿಯ ಪೋಷಕರು ಪ್ರೇಮಿಗಳಿಗೆ ಥಳಿಸಿದ್ದಾರೆ. ಹುಡುಗನ ಜೊತೆ ಜೀವಿಸಬಾರದು ಎಂದು ಯುವತಿಗೆ ಪೋಷಕರು ಒತ್ತಡ ಹಾಕಿದ್ದಾರೆ.

ಘಟನೆಯ ಬಳಿಕ ಪ್ರೇಮಿಗಳು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದರು. ಆದರೆ ಇಲ್ಲಿ ರಕ್ಷಣೆ ಸಿಗಲಿಲ್ಲ. ಹೀಗಾಗಿ ಯವತಿ ಪೊಲೀಸರು ನನ್ನ ಪೋಷಕರ ಪರ ಕೆಲಸ ಮಾಡಿ ತನಗೆ ಯಾವುದೇ ರಕ್ಷಣೆ ನೀಡಿಲ್ಲ ಎಂದು ಆರೋಪಿಸಿ ಕೋರ್ಟ್‌ ಮೊರೆ ಹೋಗಿದ್ದಳು.

ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ ಯಾವುದು ಸರಿ? ಯಾವುದು ತಪ್ಪು ಎಂಬ ತೀರ್ಮಾನವನ್ನು ತೆಗೆದುಕೊಳ್ಳಲು ಯುವತಿ ಸ್ವತಂತ್ರವಾಗಿದ್ದಾಳೆ. ಈ ವಿಚಾರದಲ್ಲಿ ಯಾರೂ ಆಕೆಗೆ ಬಲವಂತ ಮಾಡುವಂತಿಲ್ಲ ಎಂದು ಹೇಳಿದೆ. ಈಗ ಯುವತಿ ಮನೆಯನ್ನು ತೊರೆದು ಯುವಕನ ಜೊತೆ ಒಟ್ಟಿಗೆ ಈಗ ಜೀವನ ನಡೆಸುತ್ತಿದ್ದಾಳೆ.

ಮೊದಲು ಹೆಣ್ಣುಮಕ್ಕಳ ಮದುವೆ ವಯಸ್ಸು 15 ಇತ್ತು. ಶಾರದಾ ಕಾಯ್ದೆ 1929 ಅಡಿಯಲ್ಲಿ 1978ರ ನಂತರ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 15ರಿಂದ 18ಕ್ಕೆ ಹೆಚ್ಚಿಸಲಾಗಿದ್ದರೆ ಗಂಡು ಮಕ್ಕಳಿಗೆ ಮದುವೆ ವಯಸ್ಸನ್ನು 21ಕ್ಕೆ ನಿಗದಿಗೊಳಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 21ಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು.

Share This Article
Leave a Comment

Leave a Reply

Your email address will not be published. Required fields are marked *