ಬಿಎಸ್‍ವೈ ಜೊತೆ ಎಚ್‍ಡಿಕೆ ಡೀಲ್, ಜೆಡಿಎಸ್ ಮಣ್ಣಿನ ಪಕ್ಷವಲ್ಲ – ಕೋಡಿಹಳ್ಳಿ ಚಂದ್ರಶೇಖರ್

Public TV
3 Min Read

– ಮಣ್ಣಿನ ಹೆಸರು ಹೇಳಿ ಮೋಸ ಮಾಡುವ ಪಕ್ಷ
– ರೈತ ಪರವಾದ ಚಿಂತನೆ ನಿಮಗಿಲ್ಲ
– ನೀವು ಈ ಮಣ್ಣಿನ ದ್ರೋಹಿಗಳು

ಬೆಂಗಳೂರು: ಜೆಡಿಎಸ್ ಮಣ್ಣಿನ ಮಕ್ಕಳ ಪಕ್ಷವಲ್ಲ. ಅದು ರೈತರ ಹೆಸರಿನಲ್ಲಿ ಮಣ್ಣಿನ ಮಕ್ಕಳಿಗೆ ಮೋಸ ಮಾಡುವ ಪಕ್ಷ ಎಂದು ಕೋಡಿಹಳ್ಳಿ ಚಂದ್ರಶೇಖರ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಪರಿಷತ್‍ನಲ್ಲಿ ಜೆಡಿಎಸ್ ಬೆಂಬಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‍ನವರು ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ನಿನ್ನೆ ಬೆಳಗ್ಗೆ ಹೇಳಿತ್ತು. ಆದರೆ ಸಂಜೆ ವೇಳೆ ಉಲ್ಟಾ ಹೊಡೆದು ಯಡಿಯೂರಪ್ಪನರಿಗೆ ಬೆಂಬಲ ಕೋಡುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

ಬಿಎಸ್‍ವೈ ಜೊತೆ ನಿಮಗೆ ಎಷ್ಟು ಡಿಲ್ ಆಗಿದೆ? ಎಷ್ಟು ಶಾಸಕರನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದೀರಿ? ನಿಮ್ಮದು ಜ್ಯಾತ್ಯಾತೀತ ತತ್ವನು ಅಲ್ಲ ಮತ್ತು ರೈತರ ಪರವಾದ ಚಿಂತನೆಯೂ ನಿಮ್ಮ ಪಕ್ಷಕ್ಕಿಲ್ಲ. ನೀವು ಈ ಮಣ್ಣಿನ ದ್ರೋಹಿಗಳು. ನೂರಕ್ಕೆ ನೂರು ಡಿಲ್ ಮಾಡುವುದರಲ್ಲಿ ನೀವು ನಿಸ್ಸಿಮರು ಎಂದು ಆಕ್ರೋಶ ಹೊರಹಾಕಿದರು.

ಯಾರು ತಡೆದರೂ ಅದನ್ನು ಮೀರಿದ ಹೋರಾಟವನ್ನು ನಾವು ಮಾಡುತ್ತೇವೆ. ಹೋರಾಟ ದಿನದಿಂದ ದಿನಕ್ಕೆ ಬದಲಾಗುತ್ತದೆ ಅಷ್ಟೇ. ನಮ್ಮ ಕುತ್ತಿಗೆಗೆ ನೇಣು ಹಗ್ಗ ಹಾಕಿದ್ದಾರೆ. ಅದನ್ನು ಮೊದಲು ತೆಗೆಯಲಿ ನಂತರ ಚರ್ಚೆ ಮಾಡುವ ಎಂದು ಕೋಡಿಹಳ್ಳಿ ವಾಗ್ದಾಳಿ ನಡೆಸಿದರು.

ಜೆಡಿಎಸ್ ಮಣ್ಣಿನ ಮಕ್ಕಳ ಪಕ್ಷವಲ್ಲ. ಅದು ಆ ಹೆಸರಿನಲ್ಲಿ ಮಣ್ಣಿನ ಮಕ್ಕಳಿಗೆ ಮೋಸ ಮಾಡುವ ಪಕ್ಷ. ಈಗ ಅವರೆಲ್ಲ ಸುಖವಾಗಿದ್ದಾರೆ. ಅಧಿಕಾರವನ್ನು ಅನುಭವಿಸಿದ್ದಾರೆ. ಕುಮಾರಸ್ವಾಮಿ ರೈತರ, ಮಣ್ಣಿನ ಮಕ್ಕಳು ಹೆಸರು ಹೇಳಿಕೊಂಡು ಅಚ್ಚುಕಟ್ಟಾಗಿ ಅವರ ಅಧಿಕಾರವನ್ನು ನಡೆಸಿದ್ದಾರೆ. ಕುಮಾರಸ್ವಾಮಿಗೆ ನೆನಪಿರಲಿ ದೇವೇಗೌಡರು ಇದಕ್ಕೆ ಒಪ್ಪುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ದೇವೇಗೌಡರು ಅವರ ಇಬ್ಬರು ಮಕ್ಕಳಿಗೆ ಬುದ್ಧಿ ಹೇಳಬೇಕಿತ್ತು. ಹೇಳಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ ಎಂದರು.

ಕುಮಾರಸ್ವಾಮಿ ಮಾಡಿರುವ ಅಪರಾಧವನ್ನು ಈ ಮಣ್ಣು ಒಪ್ಪುವುದಿಲ್ಲ. ಮಣ್ಣಿಗೆ ದ್ರೋಹ ಮಾಡುವುದನ್ನು ನಾವು ಸಹಿಸುವುದಿಲ್ಲ. ಕುಮಾರಸ್ವಾಮಿ ಕೇವಲ ತನ್ನ ಹಿತಾಸಕ್ತಿಗಳ ರಾಜಕಾರಣ ಮಾಡಲು ಈ ತರಹದ ಕೆಳ ಮಟ್ಟದ ರಾಜಕಾರಣಕ್ಕೆ ಇಳಿದಿರುವುದನ್ನು ನಾವು ವಿರೋಧಿಸುತ್ತೇವೆ. ಯಾರ ಲಾಭಕ್ಕೆ ಭೂ ಸುಧಾರಣಾ ಕಾಯ್ದೆಯನ್ನು ಒಪ್ಪಿಕೊಂಡಿದ್ದಾರೆ? ಅಷ್ಟು ವರ್ಷಗಳ ಕಾಲ ದೀರ್ಘಕಾಲದಲ್ಲಿ ನೈಸ್ ಕಂಪನಿ ವಿರುದ್ಧ ನೀವು ನಿಮ್ಮ ಅಡ್ವೊಕೇಟ್ ಜನರಲ್ ಕಳಿಸಿ ಅಫಿಡೆವಿಟ್ ಹಾಕಿ ರೈತರ ವಿರುದ್ಧವಾದ ತೀರ್ಮಾನವನ್ನು ಸುಪ್ರೀಂನಲ್ಲಿ ಪಡೆದಿರಿ. ಇದು ಯಾರ ಪರ? ಇದು ಎಲ್ಲ ರೈತರ ವಿರುದ್ಧವಾಗಿದೆ. ರೈತರು ಯಾವುದೇ ಕಾರಣಕ್ಕೂ ನಿಮ್ಮನ್ನು ಕ್ಷಮಿಸುವುದಿಲ್ಲ. ಇದೇ ನಿಮ್ಮ ಕಡೆಯ ರಾಜಕಾರಣ ಎಂದು ನಾನು ಭಾವಿಸುತ್ತೇನೆ ಎಂದು ಗುಡುಗಿದರು.

ಕುಮಾರಸ್ವಾಮಿಯವರು ಅತಿ ಬುದ್ಧಿವಂತಿಕೆಯ ಮಾತುಗಳನ್ನು ಆಡುವುದು ಬೇಡ. ರೈತರ ಬಾಯಿಗೆ ಮಣ್ಣು ಹಾಕಿ ಆಗಿದೆ. ಈಗ ನಾನು ನಿಧಾನವಾಗಿ ಮಣ್ಣು ಹಾಕಿದ್ದೇನೆ. ಜೋಪಾನವಾಗಿ ರೈತರ ಬಾಯಿಗೆ ಮಣ್ಣು ಹಾಕಿದ್ದೇನೆ ಅಂತಾ ಹೇಳುವುದರಲ್ಲಿ ಏನಿದೆ ಅರ್ಥ ಎಂದು ಪ್ರಶ್ನಿಸಿದರು. ಇದನ್ನು ಓದಿ: ಯುವಕರನ್ನು ಕೃಷಿಯತ್ತ ಆಕರ್ಷಿಸಲು ಭೂಸುಧಾರಣಾ ತಿದ್ದುಪಡಿ ಕಾಯ್ದೆ ಸಹಾಯಕ – ಎಚ್‌ಡಿಕೆ

ಅಧಿಕಾರದಲ್ಲಿರುವಾಗ ನೀವು ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದೀರಿ. ಈಗ ಭೂಸ್ವಾಧಿನ ಕಾಯ್ದೆ ಜಾರಿಗೆ ತನ್ನಿ ಎಂದು ಹೇಳಿದ್ದೇವಾ? ನಾವು ಮಾಡೋದನ್ನು ನಾವು ಮಾಡುತ್ತೇವೆ ನೀವು ಸಮಾಧಾನವಾಗಿರಿ ಎಂದು ಹೇಳುವಂತೆ ಪ್ರಯತ್ನ ಸರ್ಕಾರ ಮಾಡುತ್ತಿದೆ. ಅವರು ಈ ಕಾಯ್ದೆಯ ಹಿಂದೆ ಹೋಗುವಂತೆ ಕೆಲಸ ಮಾಡುತ್ತಿಲ್ಲ. ನಾವು ಸುಮ್ಮನೆ ಇರುವುದಿಲ್ಲ. ಹಳ್ಳಿ ಹಳ್ಳಿಯಲ್ಲಿ ರೈತರನ್ನು ತಡೆಯುತ್ತಿದ್ದಾರೆ. ಸಣ್ಣ ಪುಟ್ಟ ವಾಹನಗಳ ಮಾಲೀಕರಿಗೆ ನೀವು ಹೋದರೆ ಕೇಸ್ ಹಾಕುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ. ಎಷ್ಟು ದಿನ ಮಾಡಲು ಆಗುತ್ತೆ ಮಾಡಲಿ. ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಗುಡುಗಿದರು.

Share This Article
Leave a Comment

Leave a Reply

Your email address will not be published. Required fields are marked *