– ಮೋದಿಯವರ ಪಕ್ಷದಲ್ಲಿ ಇರುವುದೇ ನನ್ನ ಭಾಗ್ಯ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಅವತ್ತೂ ನನ್ನ ಫ್ರೆಂಡ್, ಇಂದಿಗೂ ಒಳ್ಳೆ ಫ್ರೆಂಡ್ ಎಂದು ನವರಸ ನಾಯಕ ಜಗ್ಗೇಶ್ ಅವರು ಹೇಳಿದ್ದಾರೆ.
ಜಗ್ಗೇಶ್ ಅವರು ಸಿನಿಮಾರಂಗದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಸುದ್ದಿಗೋಷ್ಠಿಯಲ್ಲಿ ತಮ್ಮ ರಾಜಕೀಯದ ವಿಚಾರವಾಗಿಯೂ ಮಾತನಾಡಿದ ಅವರು, ನನ್ನ ರಾಜಕೀಯಕ್ಕೆ ಕರೆತಂದಿದ್ದು ಡಿಕೆ ಶಿವಕುಮಾರ್ ಅವರು ಎಂದು ತಿಳಿಸಿದರು.
ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಜಗ್ಗೇಶ್, ಡಿಕೆ ಶಿವಕುಮಾರ್ ಅವತ್ತೂ ನನ್ನ ಫ್ರೆಂಡ್, ಇಂದಿಗೂ ಒಳ್ಳೆ ಫ್ರೆಂಡ್. ನನ್ನ ಸಹೋದರ ಇದ್ದಂತೆ ಅವರೇ ನನ್ನ ರಾಜಕೀಯಕ್ಕೆ ಕರೆತಂದ್ರು. ನಾನು ರಾಜಕೀಯಕ್ಕೆ ಬರಬೇಕು ಎಂದು ಅಂದುಕೊಂಡಿರಲಿಲ್ಲ. ನಾನು ಎಂದು ಕಲಾವಿದನೆ. ರಾಜಕಾರಣಿಯಾಗಿ ಬೀದಿಯಲ್ಲಿ ನಿಂತು ಭಾಷಣ ಮಾಡಿಲ್ಲ. ಇಂದು ಬಿಜೆಪಿ ಪಕ್ಷದ ಸದಸ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಮೋದಿ ಅವರು ಮುನ್ನಡೆಸುವ ಪಕ್ಷದಲ್ಲಿ ಇರುವುದೇ ನನ್ನ ಭಾಗ್ಯ ಎಂದು ತಿಳಿಸಿದರು.
ನನಗೆ ಸಿನಿಮಾದಲ್ಲಿ ದ್ವಾರಕೇಶ್ ಅವರು ಅವಕಾಶ ಕೊಟ್ಟರು. ಪ್ರಮುಖ ವಿಲನ್ ಪಾತ್ರ ಸಿಕ್ಕಿತ್ತು. ಅಂದು ದ್ವಾರಕೇಶ್ ಅವರು ನೀನು ರಜನಿಕಾಂತ್ ತರ ಕಾಣಿಸುತ್ತೀಯಾ ಎಂದಿದ್ದರು. ಎರಡೂ ಸಿನಿಮಾಗಳು ಬರೋವರೆಗೂ ಸಂಬಳ ಅಂದ್ರೇನು ಅಂತಾನೆ ಗೊತ್ತಿರಲಿಲ್ಲ ಎಂದು ತಿಳಿಸಿದರು. ಈ ವೇಳೆ ಸಿನಿಮಾರಂಗಕ್ಕೆ ಬರುವ ಯುವಕರಿಗೆ ಕಿವಿ ಮಾತು ಹೇಳಿದ ಜಗ್ಗೇಶ್ ಇಲ್ಲಿಗೆ ಬರುವ ಮುನ್ನ ಸ್ವಲ್ಪ ಕಲಿತು ಬನ್ನಿ. ಎಲ್ಲದಕ್ಕೂ ಸಿದ್ಧವಾಗಿ ಬನ್ನಿ ಎಂದರು.
ಚಿತ್ರರಂಗ, ನಟನೆ ನನಗೆ ಸಾಕಾಗಿದೆ. ಮಕ್ಕಳಿಗಾಗಿ ಏನಾದರೂ ಮಾಡಬೇಕು. ಒಂದೊಳ್ಳೆ ದಾರಿ ತೋರಿಸಬೇಕು ಅಂತ ಇದೀನಿ ಅಷ್ಟೆ. ಅವಕಾಶ ಸಿಕ್ಕರೆ ಮಾಡುತ್ತೇನೆ ಆದರೆ ನಾನು ಎಂದು ಹುಡುಕಿಕೊಂಡು ಹೋಗಲ್ಲ. ಕೊರೊನಾ ಎಲ್ಲರಿಗೂ ಒಂದೊಳ್ಳೆ ಪಾಠ ಕಲಿಸಿದೆ. ಸಿನಿಮಾಗೆ ಇವತ್ತು, ನಿನ್ನೆ ಬಂದವರ ಮುಂದೆ ಕೈಒಡ್ಡಿ ಬದುಕಲ್ಲ. ಆ ಪರಿಸ್ಥಿತಿ ಬಂದರೆ ವಿಷ ಕುಡಿದು ಸತ್ತುಹೋಗುತ್ತೇನೆ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.