ಲಸಿಕೆ ವಿತರಣೆಗೆ ಮೋದಿ ಮೆಗಾ ಪ್ಲಾನ್, ಕೋವಿನ್ ಆ್ಯಪ್ ಅಭಿವೃದ್ಧಿ

Public TV
2 Min Read

ನವದೆಹಲಿ: ಇಡೀ ಮನುಕುಲವನ್ನು ಕಾಡುತ್ತಿರುವ ಹೆಮ್ಮಾರಿ ಕೊರೊನಾಗೆ ಲಸಿಕೆ ಸಿಗುವ ದಿನಗಳು ಹತ್ತಿರವಾಗುತ್ತಿರುವಂತೆಯೇ, ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಲಸಿಕೆ ಹಂಚಿಕೆಗೆ ತಯಾರಿ ಮಾಡಿಕೊಳ್ಳುತ್ತಿದೆ.

ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆಸಿರುವ ಕಂಪನಿಗಳ ಜೊತೆ ಸಮಾಲೋಚನೆ ನಡೆಸಿರುವ ಪ್ರಧಾನಿ ಮೋದಿ, ಅಡ್ವಾನ್ಸ್ ಆಗಿ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆದಿದ್ದು, ಲಸಿಕೆ ಅಭಿವೃದ್ಧಿ, ಡಿಸಿಜಿಐನಿಂದ ಲಸಿಕೆಗೆ ತುರ್ತು ಅನುಮೋದನೆ, ಲಸಿಕೆ ವಿತರಣೆಗೆ ಸಂಬಂಧ ಚರ್ಚೆ ನಡೆಸಲಾಗಿದೆ.

ದೇಶದ ಮೂಲೆ ಮೂಲೆಗೂ ವ್ಯಾಕ್ಸಿನ್ ಸಾಗಣೆ, ಸಂಗ್ರಹಕ್ಕೆ ಅಗತ್ಯವಿರುವ ಶೈತ್ಯಾಗಾರಗಳ ವ್ಯವಸ್ಥೆ, ಯಾರಿಗೆ ಮೊದಲು ಲಸಿಕೆ ನೀಡಬೇಕು, ತಂತ್ರಜ್ಞಾನ ಬಳಕೆ ಹೀಗೆ ಹಲವು ವಿಚಾರಗಳ ಸಂಬಂಧ ಪ್ರಧಾನಿ ಮೋದಿ, ವಿಡಿಯೋ ಕಾನ್ಫರೆನ್ಸ್‌ ಮೀಟಿಂಗ್‍ನಲ್ಲಿ ಚರ್ಚೆ ನಡೆಸಿದ್ದಾರೆ.

ಪ್ರಧಾನಮಂತ್ರಿಗಳು ತಮಗಿರುವ ಪರಮಾಧಿಕಾರ ಬಳಸಿ ಸಾಧ್ಯವಾದರೆ ಡಿಸೆಂಬರ್‌ನಲ್ಲೇ ಆಕ್ಸ್‌ಫರ್ಡ್‌ ಲಸಿಕೆಗೆ ತುರ್ತು ಅನುಮೋದನೆ ನೀಡುವ ಸಂಭವ ಇದೆ ಎಂದು ವರದಿಯಾಗಿದೆ. ಜನವರಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಏಪ್ರಿಲ್ ಒಳಗೆ ಜನಸಾಮಾನ್ಯರಿಗೆ ವ್ಯಾಕ್ಸಿನ್ ನೀಡಲು ಎಲ್ಲಾ ತಯಾರಿ ಮಾಡಿಕೊಳ್ಳಿ ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಕೊರೊನಾ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 900 ಕೋಟಿ ರೂಪಾಯಿಯನ್ನು ಮೋದಿ ಸರ್ಕಾರ ಮೀಸಲಿರಿಸಿದೆ.

ಲಸಿಕೆ ಹಂಚಿಕೆ ಹೇಗೆ?
ಲಸಿಕೆ ವಿತರಣೆ ಮೇಲೆ ನಿಗಾವಹಿಸಲು ಕೋವಿನ್ ಆ್ಯಪ್ ಅಭಿವೃದ್ಧಿ ಮಾಡಲಾಗುತ್ತದೆ. ಲಸಿಕೆಯ ಖರೀದಿ, ವಿತರಣೆ, ಸಂಗ್ರಹಣೆ, ಡೋಸ್, ವೇಳಾಪಟ್ಟಿಗಳ ಮಾಹಿತಿ ನಿರ್ವಹಣೆ ಇದರಲ್ಲಿ ಇದೆ. ಆದ್ಯತೆ ಮೇರೆಗೆ ಯಾರಿಗೆ, ಯಾವಾಗ, ಯಾರಿಂದ ಲಸಿಕೆ ಎಂಬ ಮಾಹಿತಿ ಈ ಆ್ಯಪ್‍ನಲ್ಲಿ ಲಭ್ಯ ಇರಲಿದೆ.

ಲಸಿಕೆ ಪಡೆಯುವವರು ತಮ್ಮ ಮೊಬೈಲ್‍ನಲ್ಲಿ ಕೋವಿನ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಎರಡು ಡೋಸ್ ಲಸಿಕೆ ಪಡೆದುಕೊಂಡವರಿಗೆ ಆ್ಯಪ್ ಮೂಲಕವೇ ಲಸಿಕೆ ಪ್ರಮಾಣಪತ್ರ . `ಕೊರೊನಾ ಲಸಿಕೆ ಪ್ರಮಾಣಪತ್ರ’ವನ್ನು ಲಸಿಕೆ ಪಡೆದವರು ಡಿಜಿ ಲಾಕರ್‌ನಲ್ಲಿ ಇಟ್ಟುಕೊಳ್ಳಬಹುದು.

ದೇಶದ 28 ಸಾವಿರ ಸ್ಥಳಗಳಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಲಸಿಕೆ ಶೈತ್ಯಾಗಾರಗಳ ಉಷ್ಣಾಂಶ, ವಿದ್ಯುತ್ ಏರಿಳಿತದ ಮೇಲೂ ಆ್ಯಪ್ ಮೂಲಕ ನಿಗಾ ಇಡಲಾಗುತ್ತದೆ. ಲಸಿಕೆ ಹಂಚಿಕೆಗೆ ಶೀಘ್ರ ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *