ಪಂಚಭೂತಗಳಲ್ಲಿ ರವಿ ಬೆಳಗೆರೆ ಲೀನ- ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ

Public TV
1 Min Read

ಬೆಂಗಳೂರು: ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನಡೆಯಿತು.

ಮಗ ಕರ್ಣ ಮತ್ತು ಹಿಮವಂತ್, ರವಿ ಬೆಳಗೆರೆ ಅವರ ಅಂತಿಮ ಕಾರ್ಯವನ್ನು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿಸಿದರು. ತೇಗ, ಮಾವು, ಸಾರ್ವೆ ಸೇರಿದಂತೆ ವಿವಿಧ 1 ಟನ್‍ಗೂ ಹೆಚ್ಚು ಮರದ ಸೌದೆಗಳನ್ನು ಅಂತ್ಯ ಸಂಸ್ಕಾರದ ವೇಳೆ ಬಳಕೆ ಮಾಡಲಾಗಿತ್ತು. ಶಿವರಾಂ ಅವರು ಅಂತ್ಯ ಸಂಸ್ಕಾರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.

ನಿನ್ನೆ ಮಧ್ಯರಾತ್ರಿ ಸುಮಾರು 12.15ರ ವೇಳೆಗೆ ರವಿಬೆಳಗೆರೆ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಸಾವನ್ನಪ್ಪಿದ್ದಾಗಿ ವೈದ್ಯರು ದೃಢಪಡಿಸಿದ್ದರು. ಬಳಿಕ ಅವರ ಪ್ರಾರ್ಥಿವ ಶರೀರವನ್ನು ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಗೆ ತರಲಾಗಿತ್ತು. ಮನೆಯಲ್ಲಿ ಕುಟುಂಬ ಅಪ್ತರು, ಸಂಬಂಧಿಗಳು ಅಂತಿಮ ದರ್ಶನ ಪಡೆದರು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಪದ್ಮನಾಭ ನಗರದಲ್ಲಿರೋ ಪ್ರಾರ್ಥನಾ ಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆ ಬಳಿಕ ಅಂತಿಮ ವಿಧಿವಿಧಾನದ ಕಾರ್ಯಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.

ರವಿ ಬೆಳಗೆರೆ ಅವರ ಪ್ರಾರ್ಥಿವ ಶರೀರದ ದರ್ಶನ ಪಡೆಯಲು ಹಲವು ನಟ-ನಟಿಯರು ಸೇರಿದಂತೆ ಗಣ್ಯರು ಆಗಮಿಸಿದ್ದರು. ಬಿಗ್ ಬಾಸ್ ಸ್ಪರ್ಧಿಗಳಾದ ಚಂದನ, ಭೂಮಿ ಶೆಟ್ಟಿ, ದೀಪಿಕಾ ದಾಸ್, ನಿರ್ದೇಶಕ ಯೋಗರಾಜ್ ಭಟ್, ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್, ಸಚಿವ ಆರ್.ಅಶೋಕ್, ಎಚ್ ವಿಶ್ವನಾಥ್, ಸಾರಾ ಗೋವಿಂದು ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *