– ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸಾವಿನ ಸತ್ಯ
– ಕೊಲೆಗೈದು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ ಕಿರಾತಕಿ
ಚೆನ್ನೈ: ತವರು ಮನೆಯ 20 ಗುಂಟೆ ಭೂಮಿಗಾಗಿ ತಂಗಿಯೇ ಅಕ್ಕ ಹಾಗೂ ಆಕೆಯ ಕಂದಮ್ಮನನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಲ್ಲಕ್ಕೂರಿಚಿ ಜಿಲ್ಲೆಯಲ್ಲಿ ನಡೆದಿದೆ.
ಸುಮತಿ ಮತ್ತು ಆಕೆಯ ಮಗಳು ಶ್ರೀನಿಧಿ ಕೊಲೆಯಾಗಿದ್ದು, ಸುಜತಾ ದಾರುಣವಾಗಿ ಇಬ್ಬರನ್ನು ಕೊಲೆಗೈದು ಪೆಟ್ರೋಲ್ ಸುರಿದು ಇಬ್ಬರನ್ನು ಸುಟ್ಟು ಹಾಕಿದ್ದಳು. ಕೊಲೆಯ ಸತ್ಯ ಮೃತದೇಹಗಳ ಮರಣೋತ್ತರ ಪರೀಕ್ಷೆ ವೇಳೆ ಬೆಳಕಿಗೆ ಬಂದಿತ್ತು.
ಏನಿದು ಘಟನೆ: ಕಲ್ಲಕ್ಕೂರಿಚಿ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾಗಿದ್ದ ಚಿನ್ನಸ್ವಾಮಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಇದರಲ್ಲಿ ಮೊದಲ ಮಗಳಾದ ಸುಮತಿಯನ್ನು ಕಳೆದ ಕೆಲ ವರ್ಷಗಳ ಹಿಂದೆ ಸಂಬಂಧಿಯಾಗಿದ್ದ ರಾಜಾ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸುಮತಿ ಆ ಬಳಿಕ ಅನಾರೋಗ್ಯಕ್ಕೆ ಒಳಗಾಗಿದ್ದಳು. ಇದರಿಂದ ತಂದೆ ಚಿನ್ನಸ್ವಾಮಿ ಮಗಳಿಗೆ ಚಿಕಿತ್ಸೆ ಕೊಡಿಸಲು ಹೆಚ್ಚು ಗಮನಹರಿಸಿದ್ದ.
ಏಕಾಏಕಿ ಸುಮತಿ ಹಾಗೂ ಆಕೆಯ ಪುಟ್ಟ ಕಂದಮ್ಮ ಮನೆಯಲ್ಲಿ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದರು. ಈ ವೇಳೆ ಅನಾರೋಗ್ಯದ ಕಾರಣ ಸುಮತಿಯೇ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಿದ್ದರು. ಆ ಬಳಿಕ ಇಬ್ಬರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿತ್ತು.
ಈ ನಡುವೆ ಮೃತರ ಮರಣೋತ್ತರ ಪರೀಕ್ಷೆಯ ವರದಿ ಪಡೆದ ಪೊಲೀಸರಿಗೆ ಶಾಕ್ ಕಾದಿತ್ತು. ಮೃತ ಸುಮತಿ ಹಾಗೂ ಮಗುವಿನ ದೇಹದ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಗಾಯದ ಗುರುತುಗಳು ಪತ್ತೆಯಾಗಿದ್ದನ್ನು ವರದಿಯಲ್ಲಿ ನೀಡಲಾಗಿತ್ತು. ಇದರೊಂದಿಗೆ ಮತ್ತೆ ಪ್ರಕರಣದ ವಿಚಾರಣೆ ಆರಂಭಿಸಿದ ಪೊಲೀಸರು ಅನುಮಾನದಿಂದ ಮೃತ ಸುಮತಿಯ ತಂಗಿ ಸುಜಾತಳನ್ನು ವಿಚಾರಣೆ ನಡೆಸಿದ ವೇಳೆ ಕೊಲೆ ರಹಸ್ಯ ಬಯಲಾಗಿದೆ.
ತಂದೆ ಅಕ್ಕನ ಚಿಕಿತ್ಸೆಗಾಗಿ ಇರೋ 20 ಗುಂಟೆ ಭೂಮಿ ಮಾರಾಟ ಮಾಡಿದರೆ ತನಗೆ ಏನು ಇಲ್ಲದಂತಾಗುತ್ತದೆ ಎಂದು ಸಹೋದರಿ ಹಾಗೂ ಮಗುವನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸುಮತಿ ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ, ಬಳಿಕ ಮಗಳನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ಸುಜತಾ ಪೊಲೀಸರಿಗೆ ಎದುರು ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ನವೆಂಬರ್ 5 ರಂದು ಪೊಲೀಸರು ಆರೋಪಿ ಸುಜಾತಳನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು.
