ಸಂಸದರನ್ನ ಹುಬ್ಬಳ್ಳಿಯಲ್ಲಿ ಹರಾಜು ಹಾಕ್ತೀವಿ ಕೊಳ್ಳುವವರು ಕೊಳ್ಳಬಹುದು: ವಾಟಾಳ್

Public TV
2 Min Read

– ಕೋವಿಡ್‍ನಿಂದ ವಿದ್ಯಾರ್ಥಿ, ಶಿಕ್ಷಕ ಸತ್ತರೆ ಒಂದು ಕೋಟಿ ಕೊಡಬೇಕು
– ಇತ್ತೀಚೆಗೆ ಎಲ್ಲರೂ ಹೆಲಿಕಾಪ್ಟರ್ ರಾಜಕಾರಣಿಗಳಾಗಿದ್ದಾರೆ

ರಾಯಚೂರು: ಸರ್ಕಾರ ಪ್ರವಾಹ ಪರಸ್ಥಿತಿಯನ್ನು ವೈಮಾನಿಕ ಸಮೀಕ್ಷೆ ಮಾಡಿ ಕೈತೊಳೆದುಕೊಂಡಿದೆ. ಉತ್ತರ ಕರ್ನಾಟಕದ ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರಕ್ಕೆ ಮಾನವೀಯತೆಯಿಲ್ಲ ಅಂತ ರಾಯಚೂರಿನಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ರಾಯಚೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ವಾಟಾಳ್ ನಾಗರಾಜ್ ಸರ್ಕಾರ ಹಾಗೂ ವಿವಿಧ ಪಕ್ಷಗಳ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ಎಲ್ಲರೂ ಹೆಲಿಕಾಪ್ಟರ್ ರಾಜಕಾರಣಿಗಳಾಗಿದ್ದಾರೆ. ಯಡಿಯೂರಪ್ಪನವರ ಬಳಿ ಹೆಲಿಕಾಪ್ಟರ್ ಇದೆ. ಜೆಡಿಎಸ್, ಕಾಂಗ್ರೆಸ್ಸಿನವರು ಹೆಲಿಕಾಪ್ಟರಿನಲ್ಲೇ ಬರುತ್ತಾರೆ. ಇನ್ನು ಮುಂದೆ ಕಾರಲ್ಲಿ ಕೆಳಗಡೆ ಓಡಾಡಲು ಆಗದ ರೋಗ ಬಂದಿದೆ ಅಂತ ವೈದ್ಯರು ಸರ್ಟಿಫಿಕೇಟ್ ಕೊಡಬೇಕು. ಹೆಲಿಕಾಪ್ಟರಿನಲ್ಲಿ ಓಡಾಡುವವರಿಗಾಗಿ ಈ ಹೊಸ ನಿರ್ಣಯವಾಗಬೇಕಿದೆ ಎಂದರು.

ಕರ್ನಾಟಕವನ್ನು ಕೇಂದ್ರ ಸರ್ಕಾರ ಗುಲಾಮರ ರೀತಿ ನೋಡುತ್ತಿದೆ. ಪ್ರಧಾನಿ ಮೋದಿ ಎಲ್ಲಾ ಕಡೆ ಹೋಗುತ್ತಾರೆ ಕರ್ನಾಟಕಕ್ಕೆ ಬರಲ್ಲ. ನಮ್ಮ ಎಂಪಿಗಳು ದನಕಾಯುತ್ತಿದ್ದಾರಾ? ಯಾಕೆ ಪ್ರಧಾನಿಯನ್ನು ಕರೆದುಕೊಂಡು ಬರುತ್ತಿಲ್ಲ ಅಂತ ಪ್ರಶ್ನಿಸಿದರು. ಸದಾನಂದಗೌಡ ಸತ್ತರೂ ನಗ್ತಾರೆ, ಬದುಕಿದರೂ ನಗ್ತಾರೆ ಅವರ ನಗುವೆ ಒಂದು ವಿಚಿತ್ರ ಎಂದರು. ಪ್ರವಾಹ ಪೀಡಿತ ಜಿಲ್ಲೆಗಳಿಗೆ 50 ಸಾವಿರ ಕೋಟಿ ಪರಿಹಾರ ನೀಡಬೇಕು ಅಂತ ಆಗ್ರಹಿಸಿದರು. ಅ.29 ರಂದು ಎಂಪಿಗಳನ್ನ ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಮುಂದೆ ಹರಾಜು ಹಾಕಿ ಪ್ರತಿಭಟನೆ ಮಾಡುತ್ತೇವೆ. ಕೊಳ್ಳುವವರು ಬಂದು ಕೊಳ್ಳಬಹುದು, ವಿನೂತನ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ನಾನು ಗೆಲ್ಲಲೇ ಬೇಕು ಗೆದ್ದರೆ ವಿಧಾನಪರಿಷತ್ತಿನಲ್ಲಿ ಧ್ವನಿ ಭಾರೀ ಜೋರಾಗುತ್ತೆ ಅಂತ ಶಿಕ್ಷಕರ ಮತಯಾಚಿಸಿದರು. ಪ್ರೌಢಶಾಲಾ ಶಿಕ್ಷಕರಿಗೆ, ಪಿಯು ಉಪನ್ಯಾಸಕರಿಗೆ ಬಡ್ತಿ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಇಟ್ಟುಕೊಂಡು ನವೆಂಬರ್ 1 ರಿಂದ ಒಂದು ವರ್ಷದವರೆಗೆ ಹೋರಾಟ ಮಾಡುವುದಾಗಿ ಹೇಳಿದರು. ಕೊರೊನಾ ಸಮಯದಲ್ಲಿ ಕಾಲೇಜು ತೆರೆಯಲು ನನ್ನ ವಿರೋಧವಿದೆ. ಆನ್‍ಲೈನ್ ಒಂದು ಬೋಗಸ್, ಖಾಸಗಿ ಸಂಸ್ಥೆಗಳ ಹಣ ವಸೂಲಿ ವಿರುದ್ಧ ಹೋರಾಟ ಮಾಡುತ್ತೇವೆ. ಕಾಲೇಜು ಆರಂಭಿಸುವುದು ಬೇಡ ಶೂನ್ಯ ವರ್ಷ ಅಂತ ತೀರ್ಮಾನ ಮಾಡಬೇಕು. ಕೋವಿಡ್‍ನಿಂದ ವಿದ್ಯಾರ್ಥಿ, ಶಿಕ್ಷಕ ಸತ್ತರೆ ಒಂದು ಕೋಟಿ ಕೊಡಬೇಕು ಅಂತ ವಾಟಾಳ್ ನಾಗರಾಜ್ ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *