ಪ್ರವಾಹ ನಿಂತರೂ ಸಂತ್ರಸ್ತರ ಪರದಾಟ ನಿಂತಿಲ್ಲ – ಸೂರಿಲ್ಲ, ಕೇಳುವವರು ಯಾರಿಲ್ಲ?

Public TV
2 Min Read

ರಾಯಚೂರು: ಜಿಲ್ಲೆಯಲ್ಲಿ ಪ್ರವಾಹವೇನೋ ಇಳಿಮುಖವಾಗಿದೆ. ಆದ್ರೆ ಅತೀವೃಷ್ಠಿಯಿಂದ ಮನೆ ಕಳೆದುಕೊಂಡ ಜನ ಮಾತ್ರ ಇನ್ನೂ ಬೀದಿಯಲ್ಲೇ ಇದ್ದಾರೆ. ಒಂದು ತಿಂಗಳಿನಿಂದ ಅತಿಯಾಗಿ ಸುರಿದ ಮಳೆ ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಜನರ ಬದುಕನ್ನ ಕಸಿದುಕೊಂಡಿದೆ. ಆಶ್ರಯ ಸಿಕ್ಕರೂ ಅನ್ನ ಸಿಗದೆ ಸಂತ್ರಸ್ತರು ಪರದಾಡುತ್ತಿದ್ದಾರೆ. ಸರ್ಕಾರಿ ಶಾಲೆ, ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಆಶ್ರಯ ನೀಡಿದೆ. ಆದ್ರೆ ಯಾವುದೇ ವ್ಯವಸ್ಥೆಗಳನ್ನ ಮಾಡಿಲ್ಲ. ಹೀಗಾಗಿ ಸುಮಾರು 56 ಕುಟುಂಬಗಳು ಊಟವಿಲ್ಲದೆ ಪರದಾಡುತ್ತಿವೆ. ಚಿಕ್ಕಮಕ್ಕಳು, ವೃದ್ದರು, ಮಹಿಳೆಯರು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಒಂದು ತಿಂಗಳಿನಿಂದ ಶಾಲೆಯಲ್ಲಿಯೇ ವಾಸ ಮಾಡುತ್ತಿರುವ ಕುಟುಂಬಗಳನ್ನ ಕೇಳುವವರು ಇಲ್ಲದಂತಾಗಿದೆ.

ಆರಂಭದಲ್ಲಿ ಅಧಿಕಾರಿಗಳು ಬಂದು ಒಂದೆರಡು ಬಾರಿ ದಿನಸಿ ನೀಡಿದ್ದಾರೆ ನಂತರ ಇತ್ತ ಯಾರು ನೋಡಿಲ್ಲ. ಊಟಕ್ಕಾಗಿ ಕೂಲಿ ಮಾಡಬೇಕು ಅಡುಗೆ ಮಾಡಿಕೊಳ್ಳಬೇಕು ಅನ್ನೋದು ಸಂತ್ರಸ್ತರ ಅಳಲು. ತಾತ್ಕಾಲಿಕವಾಗಿ ಶೆಡ್ಡು ಹಾಕಿಕೊಡುವುದಾಗಿ ಹೇಳಿದ್ದ ಶಾಸಕ ಬಸನಗೌಡ ದದ್ದಲ ಇದುವರೆಗೂ ಯಾವುದೇ ವ್ಯವಸ್ಥೆ ಮಾಡಿಲ್ಲ. ನಿರಂತರ ಮಳೆಯಿಂದ ಶಾಲೆ ಆವರಣ ಸಹ ಕೆಸರು ಗದ್ದೆಯಂತಾಗಿದೆ. ಮಳೆಯಿಂದಾಗಿ ಕೂಲಿ ಕೆಲಸವೂ ಇಲ್ಲ. ಸಂತ್ರಸ್ತ ಕುಟುಂಬಗಳು ಶಾಲೆ, ಸಮುದಾಯ ಭವನವನ್ನೇ ಆಶ್ರಯಿಸಿವೆ. ನಮಗೆ ಸೂರು ಕಲ್ಪಿಸಿ ಅಂತ ಸಂತ್ರಸ್ತರು ಆಗ್ರಹಿಸಿದ್ದಾರೆ.

ನೂರಕ್ಕೂ ಹೆಚ್ಚು ಮನೆಗಳು ಬಿದ್ದಿವೆ, ಇದರಲ್ಲಿ 50 ಮನೆಗಳು ಸಂಪೂರ್ಣ ನೆಲಸಮವಾಗಿವೆ. ಸೂರು ಕಳೆದುಕೊಂಡಿರುವ ಜನ ಈಗ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇನ್ನೂ ಬಿದ್ದಮನೆಗಳಲ್ಲಿ ಕೆಲವರು ಬದುಕುತ್ತಿದ್ದಾರೆ. ಸಣ್ಣಪುಟ್ಟ ಶೆಡ್ ಗಳನ್ನ ಹಾಕಿಕೊಂಡು ಬದುಕುತ್ತಿರುವ ಜನ ಪ್ರತಿದಿನ ಗಾಳಿ ಮಳೆಗೆ ಹೆದರಿಕೊಂಡೆ ಜೀವನ ನಡೆಸುತ್ತಿದ್ದಾರೆ. ಆದ್ರೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾತ್ರ ಇವರ ಕಡೆ ಗಮನ ಹರಿಸುತ್ತಿಲ್ಲ. ಇದುವರೆಗೆ ಕೇವಲ ಎರಡು ಬಾರಿ ದಿನಸಿಯನ್ನ ನೀಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ.

ಸಂಪೂರ್ಣವಾಗಿ ಬಿದ್ದಿರುವ ಮನೆಗಳಿಗೆ ಪರಿಹಾರವಾಗಿ ಶೆಡ್ ನಿರ್ಮಿಸಿಕೊಳ್ಳಲು ಸದ್ಯಕ್ಕೆ ಟಿನ್ ಹಾಗೂ ಬಲೀಸ್‍ಗಳನ್ನ ಮಾತ್ರ ನೀಡಲಾಗಿದೆ. ಆದ್ರೆ ಇದ್ದ ಮನೆ ಕಳೆದುಕೊಂಡು ಕಂಗಾಲಾಗಿರುವ ಕುಟುಂಬಗಳು ದಿಕ್ಕು ಕಾಣದಂತಾಗಿವೆ. ಇನ್ನೊಂದೆಡೆ ನಿರಂತರ ಸುರಿಯುತ್ತಿರುವ ಮಳೆ ಕೂಲಿ ಕೆಲಸಕ್ಕೂ ಅಡ್ಡಿಯಾಗಿದೆ. ತುತ್ತು ಅನ್ನಕ್ಕೆ ಏನು ಮಾಡೋದು ಅಂತ ಕಂಗೆಟ್ಟ ಜನರ ಬಗ್ಗೆ ಕನಿಷ್ಠ ಈಗಲಾದ್ರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಶೀಘ್ರದಲ್ಲಿ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಅಂತ ಸಂತ್ರಸ್ತರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *