ಕಂಗನಾಗೆ ಅಕ್ಟೋಬರ್ 1 ವಿಶೇಷ ದಿನವಂತೆ

Public TV
2 Min Read

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಖಡಕ್ ಪ್ರತಿಕ್ರಿಯೆಗಳ ಮೂಲಕವೇ ಚಿರಪರಿಚಿತ. ಅದರಲ್ಲೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಅವರು ಸಿಡಿದೆದ್ದಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ನಟಿ ಬಾಲಿವುಡ್‍ನಲ್ಲಿನ ಸ್ವಜನಪಕ್ಷಪಾತದ ಕುರಿತು ಧ್ವನಿ ಎತ್ತಿದ್ದರು. ಇದೆಲ್ಲ ಗದ್ದಲ ನಂತರ ಇದೀಗ ಅವರು ಅಕ್ಟೋಬರ್ 1 ವಿಶೇಷ ದಿನ ಎಂದು ಹೇಳಿಕೊಂಡಿದ್ದಾರೆ.

ಮಣಿಕರ್ಣಿಕಾ ಸಿನಿಮಾದಲ್ಲಿ ಮಿಂಚಿದ್ದ ನಟಿ ಕಂಗನಾ ಬಳಿಕ ಹಲವು ಸಿನಿಮಾಗಳನ್ನು ಮಾಡಿದರೂ ಅಷ್ಟೇನು ಯಶಸ್ಸು ಕಾಣಲಿಲ್ಲ. ಆದರೆ ಇದೀಗ ಅವರು ವಿಶಿಷ್ಟ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ಕುರಿತು ಇಡೀ ದಕ್ಷಿಣ ಭಾರತದ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಚಿತ್ರ ಶೂಟಿಂಗ್ ಆರಂಭವಾಗುತ್ತಿದ್ದಂತೆ ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ವಿಧಿಸಲಾಯಿತು. ಹೀಗಾಗಿ ಚಿತ್ರೀಕರಣಕ್ಕೂ ಬ್ರೇಕ್ ಬಿತ್ತು. ಇದೀಗ ಕೇಂದ್ರ ಸರ್ಕಾರ ಅನ್‍ಲಾಕ್-5 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಚಿತ್ರೀಕರಣಕ್ಕೆ ಹಾಗೂ ಚಿತ್ರ ಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಸ್ಯಾಂಡಲ್‍ವುಡ್, ಬಾಲಿವುಡ್ ಸೇರಿದಂತೆ ಎಲ್ಲ ಭಾಷೆಗಳ ಚಿತ್ರೀಕರಣಗಳು ಗರಿಗೆದರಿವೆ. ಬಹುತೇಕ ನಟನರು ಇದೀಗ ಶೂಟಿಂಗ್‍ನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ಕಂಗನಾ ಸಹ ತಮ್ಮ ವಿಶಿಷ್ಟ ಸಿನಿಮಾದ ಚಿತ್ರೀಕರಣವನ್ನು ಏಳು ತಿಂಗಳ ಬಳಿಕ ಮತ್ತೆ ಆರಂಭಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಕಂಗನಾ ಶೂಟಿಂಗ್‍ಗೆ ತೆರಳುತ್ತಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.

ಆತ್ಮೀಯ ಸ್ನೇಹಿತರೇ ಇಂದು ನನಗೆ ತುಂಬಾ ವಿಶೇಷವಾದ ದಿನ, 7 ತಿಂಗಳ ಬಳಿಕ ಮತ್ತೆ ಕೆಲಸ ಆರಂಭಿಸುತ್ತಿದ್ದೇನೆ. ನನ್ನ ಅತ್ಯಂತ ಮಹತ್ವಾಂಕ್ಷೆಯ ದ್ವಿಭಾಷಾ ಚಿತ್ರ ತಲೈವಿಗಾಗಿ ದಕ್ಷಿಣ ಭಾರತದತ್ತ ಪ್ರಯಾಣ ಬೆಳೆಸಿದ್ದೇನೆ. ಸಾಂಕ್ರಾಮಿಕ ರೋಗದ ಈ ಪರೀಕ್ಷೆ ಸಮಯದಲ್ಲಿ ನಿಮ್ಮ ಆಶೀರ್ವಾದ ಇರಲಿ. ಪ್ರಯಾಣ ಬೆಳೆಸುವುದಕ್ಕೂ ಮುನ್ನ ಬೆಳಗ್ಗೆ ಹಾಗೆ ತೆಗೆದ ಸೆಲ್ಫಿಗಳಿವು. ಇವುಗಳನ್ನು ನೀವು ಇಷ್ಟಪಡುತ್ತೀರೆಂದು ಭಾವಿಸುತ್ತೇನೆ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಚಿತ್ರೀಕರಣಕ್ಕೆ ತೆರಳುತ್ತಿರುವ ಸಂತಸ ಹಂಚಿಕೊಂಡಿದ್ದಾರೆ.

ಕೇವಲ ಕಂಗನಾ ರಣಾವತ್ ಅವರಿಗೆ ಮಾತ್ರವಲ್ಲ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನಾಧಾರಿತ ಚಿತ್ರವಾಗಿರುವ ‘ತಲೈವಿ’ಗಾಗಿ ಇಡೀ ದಕ್ಷಿಣ ಭಾರತ ಕಾತರದಿಂದ ಕಾಯುತ್ತಿದೆ. ಸಿನಿಮಾದಲ್ಲಿ ಕಂಗನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೇಗೆ ಮೂಡಿ ಬರಲಿದೆ ಕಾದು ನೋಡಬೇಕಿದೆ.

‘ತಲೈವಿ’ ಸಿನಿಮಾವನ್ನು ಎ.ಎಲ್.ವಿಜಯ್ ನಿರ್ದೇಶಿಸುತ್ತಿದ್ದು, ಬಾಹುಬಲಿ ಖ್ಯಾತಿಯ ಕೆ.ವಿ.ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಬರೆದಿದ್ದಾರೆ. ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವಿಷ್ಣು ಇಂಧೂರಿ ಮತ್ತು ಶೈಲೇಶ್ ಆರ್.ಸಿಂಗ್ ನಿರ್ಮಿಸುತ್ತಿದ್ದಾರೆ. ಜಯಲಲಿತಾ ಪಾತ್ರವನ್ನು ಕಂಗನಾ ಮಾಡಿದರೆ, ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಳ್ಳುತ್ತಿದ್ದಾರೆ. ಕರುಣಾನಿಧಿ ಪಾತ್ರವನ್ನು ಪ್ರಕಾಶ್ ರೈ ನಿಭಾಯಿಸುತ್ತಿದ್ದಾರೆ. ಜಯಲಲಿತಾ ತಾಯಿ ಸಂಧ್ಯಾ ಪಾತ್ರವನ್ನು ಬಾಲಿವುಡ್ ನಟಿ ಭಾಗ್ಯಶ್ರೀ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬಹುತಾರಾಗಣವಿದ್ದು, ಜಯಲಲಿತಾ ಅವರ ಜೀವನವನ್ನು ಯಾವ ರೀತಿ ತೆರೆಯ ಮೇಲೆ ತರುತ್ತಾರೆ ಎಂಬ ಕುತೂಹಲ ಅಭಿಮಾನಿಗಳದ್ದು.

Share This Article
Leave a Comment

Leave a Reply

Your email address will not be published. Required fields are marked *