ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಐಪಿಎಲ್

Public TV
2 Min Read

ನವದೆಹಲಿ: ಸೆಪ್ಟೆಂಬರ್ 19ರಿಂದ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ ಆರಂಭಿಕ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದೆ.

ಕಳೆದ ಮಾರ್ಚ್ ತಿಂಗಳಿನಲ್ಲೇ ನಡೆಯಬೇಕಿದ್ದ ಐಪಿಎಲ್, ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿತ್ತು. ಈ ನಡುವೆ ಐಪಿಎಲ್ ಅನ್ನು ಈ ಬಾರೀ ರದ್ದು ಮಾಡಲಾಗುತ್ತದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಬಿಸಿಸಿಐ ಈ ಬಾರಿಯ ಐಪಿಎಲ್ ಅನ್ನು ನಡೆಸಲೇಬೇಕು ಎಂದು ಪಣತೊಟ್ಟು ಯುಎಇಯಲ್ಲಿ ಟೂರ್ನಿಯನ್ನು ಯಶಸ್ವಿಯಾಗಿ ಆರಂಭ ಮಾಡಿತ್ತು. ಅದರ ಪ್ರತಿಫಲ ಎಂಬಂತೆ ಐಪಿಎಲ್ ತನ್ನ ಆರಂಭಿಕ ಪಂದ್ಯದಲ್ಲೇ ಬಹು ದೊಡ್ಡ ದಾಖಲೆ ಬರೆದಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರು, ಡ್ರೀಮ್ 11 ಐಪಿಎಲ್ ಮೊದಲ ಪಂದ್ಯದಲ್ಲೇ ದಾಖಲೆ ಬರೆದಿದೆ. ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಪ್ರಕಾರ, ಐಪಿಎಲ್ ಆರಂಭಿಕ ಪಂದ್ಯವನ್ನು ಸುಮಾರು 20 ಕೋಟಿ ಜನರು ಆನ್‍ಲೈನ್ ಮತ್ತು ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಇಲ್ಲಿಯವರೆಗೂ ಯಾವುದೇ ಕ್ರೀಡಾ ಟೂರ್ನಿಯ ಮೊದಲ ಪಂದ್ಯವನ್ನು ಇಷ್ಟೊಂದು ಜನರು ವೀಕ್ಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಇದೇ ವಿಚಾರವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಟ್ವೀಟ್ ಮಾಡಿದ್ದು, ಧನ್ಯವಾದಗಳು ಇಂಡಿಯಾ ಇದು ಡ್ರೀಮ್ 11 ಐಪಿಎಲ್‍ನಲ್ಲಿ ಡ್ರೀಮ್ ಆರಂಭವಾಗಿದೆ. ಇಡೀ ಐಪಿಎಲ್ ಇತಿಹಾಸದಲ್ಲೇ ಟಿವಿ ಮತ್ತು ಡಿಜಿಟೆಲ್ ಮಾಧ್ಯಮದಲ್ಲಿ ಅತೀ ಹೆಚ್ಚು ಜನರು ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಮುಂಬೈ ಮತ್ತು ಚೆನ್ನೈ ನಡುವಿನ ಮೊದಲ ಪಂದ್ಯವನ್ನು 200 ದಶಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದೆ.

ಐಪಿಎಲ್ ಆರಂಭಿಕ ಪಂದ್ಯದಲ್ಲಿ ಐಪಿಎಲ್‍ನ ಜನಪ್ರಿಯ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಕೊರೊನಾ ಸಮಯದಲ್ಲಿ ಯಾವುದೇ ಮನರಂಜನೆ ಇಲ್ಲದೇ ಬೇಸತ್ತಿದ್ದ ಜನರು, ಆರಂಭಿಕ ಪಂದ್ಯವನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಐಪಿಎಲ್ ಹೊಸ ದಾಖಲೆ ಬರೆಯಲು ದಾರಿ ಮಾಡಿಕೊಟ್ಟಿದ್ದಾರೆ.

ಸೆಪ್ಟಂಬರ್ 19ರಂದು ಅಬುಧಾಬಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಜಯಭೇರಿ ಭಾರಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಮುಂಬೈ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು. ಅದರಂತೆ ನಿಗದಿತ 20 ಓವರ್ ಗಳಲ್ಲಿ ಮುಂಬೈ ಕೇವಲ 162 ರನ್ ಗಳಿಸಿತ್ತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಅಂಬಾಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿಸ್ ಅವರ ಅಮೋಘ ಅರ್ಧ ಶತಕದಿಂದ 5 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *