ಅಮ್ಮಂದಿರೇ ಎಚ್ಚರ – ಪಾಲಿಷ್ ಮಾಡಿದ ಅಕ್ಕಿ ತಿಂದ್ರೆ ಶಿಶುಗಳಲ್ಲಿ ಹೃದಯ ಸಂಬಂಧಿ ಕಾಯಿಲೆ

Public TV
2 Min Read

– ಬೆಚ್ಚಿ ಬೀಳಿಸುವಂತ ರೈಸ್ ಕಹಾನಿ ಬಿಚ್ಚಿಟ್ಟ ವೈದ್ಯರ ಸರ್ವೆ

ಬೆಂಗಳೂರು: ಓವರ್ ಪಾಲಿಷ್ ಮಾಡಿದ ಅಕ್ಕಿ ಬಳಸುವುದರಿಂದ ಆಗ ತಾನೇ ಹುಟ್ಟಿದ ನವಜಾತ ಶಿಶುಗಳಲ್ಲಿ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಆಗ ತಾನೇ ಹುಟ್ಟುವ ನವಜಾತ ಶಿಶುಗಳಿಗೆ ಹೃದಯಘಾತ, ಉಸಿರಾಟದ ತೊಂದರೆ, ರಕ್ತದೊತ್ತಡ, ಧ್ವನಿಯ ಸಮಸ್ಯೆ ಹೆಚ್ಚಳವಾಗಿದ್ದು, ಇದು ವೈದ್ಯರ ಗಮನಕ್ಕೆ ಬಂದಿದೆ. ಇದರಿಂದ ಭಯಗೊಂಡ ವೈದ್ಯರು ಇದಕ್ಕೆ ಕಾರಣ ಹುಡುಕಲು ಸಮೀಕ್ಷೆ ಮಾಡಿದ್ದಾರೆ. ಈ ಸಮೀಕ್ಷೆಯಲ್ಲಿ ಭಯಾನಕ ವಿಚಾರವೊಂದು ಬೆಳಕಿಗೆ ಬಂದಿದ್ದು, ಪಾಲಿಷ್ ಮಾಡಿದ ಅಕ್ಕಿಯನ್ನು ಹೆಚ್ಚು ತಿನ್ನುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಗೊತ್ತಾಗಿದೆ.

ರೈಸ್ ತಿನ್ನಲು ಚೆನ್ನಾಗಿ ಇರಬೇಕು. ಬೆಳ್ಳಗೆ ಕಾಣಬೇಕು ಎಂದು ಇತ್ತೀಚೆಗೆ ಪಾಲಿಷ್ ಮಾಡಿದ ಅಕ್ಕಿಯನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಆದರೆ ಇದರಿಂದ ಹುಟ್ಟುವ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ವೈದ್ಯರ ಸಮೀಕ್ಷೆ ಬಹಿರಂಗಪಡಿಸಿದೆ. ಓವರ್ ಪಾಲಿಷ್ ಮಾಡಿದ ಅಕ್ಕಿಯನ್ನು ತಿನ್ನೋದ್ರಿಂದ ವಿಟಮಿನ್ ಬಿ-1 ಕೊರತೆಯಾಗುತ್ತದೆ. ಈ ಜೀವಸತ್ವ ಕೊರತೆಯಿಂದ ಹುಟ್ಟುವ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ.

ಅಕ್ಕಿಯ ಮೇಲ್ಪದರದಲ್ಲಿ ಈ ವಿಟಮಿನ್ ಬಿ-1 ಇರುತ್ತದೆ. ಆದರೆ ನಾವು ಅಕ್ಕಿಯನ್ನು ಪಾಲಿಷ್ ಮಾಡಿಸಿದಾಗ ಈ ವಿಟಮಿನ್ ಹೊರಟು ಹೋಗುತ್ತೆ. ಈ ಅಕ್ಕಿಯನ್ನು ಸೇವಿಸುವ ತಾಯಿಯರು ಮಕ್ಕಳಿಗೆ ಎದೆ ಹಾಲು ನೀಡಿದಾಗ ಇದರಲ್ಲಿ ವಿಟಮಿನ್ ಬಿ-1 ಕೊರೆತೆ ಬರುತ್ತದೆ. ಇದರಿಂದ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ಬರುತ್ತದೆ. ಹೀಗಾಗಿ ಗರ್ಭಿಣಿಯರು ಪಾಲಿಷ್ ಮಾಡಿದ ಅಕ್ಕಿಯನ್ನು ಸೇವನೆ ಮಾಡದಂತೆ ಜಯದೇವ ಆಸ್ಪತ್ರೆಯಿಂದ ಗರ್ಭಿಣಿಯರಿಗೆ ಸಂದೇಶ ನೀಡಲಾಗಿದೆ.

ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿದಾಗ ಈ ವಿಚಾರ ಬಯಲಾಗಿದೆ. ಸುಮಾರು 250 ನವಜಾತ ಶಿಶುಗಳನ್ನು ಈ ಸರ್ವೇಗೆ ಒಳಪಡಿಸಲಾಗಿದೆ ಎಂದು ಜಯದೇವ ಆಸ್ಪತ್ರೆ ವೈದ್ಯರ ತಂಡ ತಿಳಿಸಿದೆ. ಪಾಲಿಷ್ ಅಕ್ಕಿಯ ಬದಲು ಕುಚ್ಚಲಕ್ಕಿ, ರೆಡ್ ರೈಸ್ ಅಥವಾ ಹೆಚ್ಚು ಪಾಲಿಷ್ ಆಗದ ಅಕ್ಕಿಯ ಅನ್ನವನ್ನು ತಿನ್ನುವಂತೆ ಡಾ. ಮಂಜುನಾಥ್ ಅವರು ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *