ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯೋದಿಲ್ಲ: ಡಿಸಿ ತಮ್ಮಣ್ಣ ಗಂಭೀರ ಆರೋಪ

Public TV
2 Min Read

ಮಂಡ್ಯ: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಗಳು ನಡೆಯುತ್ತಿದ್ದು, ಈ ಮಧ್ಯೆ ಶಾಸಕ ಡಿಸಿ ತಮ್ಮಣ್ಣ ಪೊಲೀಸರ ಮೇಲೆಯೇ ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಮಾಧ್ಯಮದಲ್ಲಿ ಡ್ರಗ್ಸ್ ದಂಧೆ ಬಗ್ಗೆ ನೋಡುತ್ತಿದ್ದೇನೆ. ಬರೀ ಸಿನಿಮಾ ತಾರೆಯರು, ರಾಜಕಾರಣಿಗಳು, ರಾಜಕಾರಣಿ ಮಕ್ಕಳ ಬಗ್ಗೆ ಮಾತ್ರ ಬರುತ್ತಿದೆ. ಬೆಂಗಳೂರು, ಮೈಸೂರು, ಬೆಳಗಾಂ, ಇಂತಹ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಅಂತ ಹೇಳುತ್ತಾರೆ. ಇವಾಗ ಮದ್ದೂರಿನಲ್ಲಿ ಇಲ್ವಾ ಡ್ರಗ್ಸ್. ಮಂಡ್ಯದಲ್ಲಿ ಇಲ್ವಾ,? ಯಾವ ತಾಲೂಕಿನಲ್ಲಿ ಇಲ್ಲ,? ಹಳ್ಳಿ ಹಳ್ಳಿಯಲ್ಲಿದೆ. ಅದಕ್ಕೆ ಹೇಳಿದ್ದಿನಿ, ಒಂದು ಕಡೆ ಪೊಲೀಸರನ್ನ ಕೊರೊನಾ ಸಮಯದಲ್ಲಿ ವಾರಿಯರ್ಸ್ ಅಂತ ಸನ್ಮಾನ ಮಾಡಿದ್ದೀವಿ. ಜನತೆ ಅವರಿಗೆ ಹೂಮಳೆ ಸುರಿದು ಗೌರವಿಸಿದ್ದಾರೆ. ಅದೇ ನಾಣ್ಯದ ಪೋಲಿಸರ ಇನ್ನೊಂದು ಮುಖ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇಡೀ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಮಾಡಿ. ಒಳ್ಳೆಯ ಕೆಲಸ ಮಾಡಿದವರ ಹೊಗಳ್ತೀವಿ. ಮಾಡಿಲ್ಲಾ ಅಂದ್ರೆ ತೆಗಳಕ್ಕೂ ತೆಗಳಬೇಕು, ಅವರಿಗೆ ಶಿಕ್ಷೆ ಕೊಡಬೇಕು. ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯುವುದಿಲ್ಲ. ಪ್ರತಿ ತಾಲೂಕು, ಜಿಲ್ಲಾಮಟ್ಟದಲ್ಲಿ, ಹಳ್ಳಿ ಹಳ್ಳಿಗೂ ಕೂಡ ಡ್ರಗ್ಸ್ ಸಪ್ಲೈ ಆಗುತ್ತಿದೆ. ಇಂತಹ ಕೊಂಡಿಯನ್ನು ಬೇಧಿಸಿ. ಜನರ ದಾರಿತಪ್ಪಿಸುವ ಸಲುವಾಗಿ ಸಿನಿಮಾ ತಾರೆಯರು, ರಾಜಕಾರಣಿಗಳು, ರಾಜಕಾರಣಿ ಮಕ್ಕಳು ಅಂತ ದಾರಿ ತಪ್ಪಿಸಬೇಡಿ ಎಂದ ಅವರು ಈ ಬಗ್ಗೆ ಸಿಎಂ, ಹೋಂ ಮಿನಿಸ್ಟರ್ ಗೆ ಪತ್ರ ಬರೆಯಲಾಗಿದೆ ಅಂತ ತಿಳಿಸಿದರು.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ಆಪ್ತ ಸಿಸಿಬಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ರಾಗಿಣಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ನಟಿ ಸೋಮವಾರ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತ ರಾಗಿಣಿಗೆ ಸಿಸಿಬಿ ಅಧಿಕಾರಿಗಳು ಮತ್ತೆ ಸಮನ್ಸ್ ನೀಡಿದ್ದಾರೆ. ಇತ್ತ ನಟಿ ಸಂಜನಾ ಗಲ್ರಾಣಿ ಆಪ್ತ ಹಾಗೂ ಶರ್ಮಿಳಾ ಮಾಂಡ್ರೆ ಆಪ್ತನನ್ನು ಕೂಡ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

https://www.youtube.com/watch?v=ruRxb30Kzy8

Share This Article
Leave a Comment

Leave a Reply

Your email address will not be published. Required fields are marked *