ರೈನಾ ಸೋದರತ್ತೆ ಕುಟುಂಬದ ಮೇಲೆ ದಾಳಿಕೋರರಿಂದ ಹಲ್ಲೆ – ಸೋದರ ಮಾವ ಸಾವು

Public TV
2 Min Read

– ಸೋದರತ್ತೆ, ಮಕ್ಕಳಿಬ್ಬರು ಗಂಭೀರ ಸ್ಥಿತಿ

ನವದೆಹಲಿ: ಭಾರತದ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರ ಸೋದರತ್ತೆಯ ಕುಟುಂಬದ ಮೇಲೆ ದಾಳಿಕೋರರು ಹಲ್ಲೆ ಮಾಡಿದ್ದು, ಸೋದರಮಾವ ಸಾವನ್ನಪ್ಪಿದ್ದಾರೆ.

ಸುರೇಶ್ ರೈನಾ ಅವರು ಐಪಿಎಲ್-2020ಯಲ್ಲಿ ಭಾಗವಹಿಸಲು ಆಗಸ್ಟ್ 21ರಂದು ಯುಎಇಗೆ ಹೋಗಿದ್ದರು. ಇದರ ನಡುವೆ ಅವರ ಸೋದರಮಾವ ಸಾವನ್ನಪ್ಪಿರುವ ವಿಚಾರ ತಿಳಿದು ಈಗ ವಾಪಸ್ ಆಗಲಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಿಂದಲೇ ರೈನಾ ಅವರು ಹೊರಬಂದಿದ್ದಾರೆ.

ರಾಷ್ಟ್ರೀಯ ಮಾಧ್ಯಮದ ವರದಿಯ ಪ್ರಕಾರ, ಪಂಜಾಬ್‍ನ ಪಠಾಣ್‍ಕೋಟ್‍ನ ತರಿಯಾಲ್ ಗ್ರಾಮದಲ್ಲಿ ವಾಸವಿರುವ ರೈನಾ ಅವರ ಸೋದರತ್ತೆ ಕುಟುಂಬ ತಮ್ಮ ಮನೆಯ ಮಹಡಿ ಮೇಲೆ ಮಲಗಿತ್ತು. ಈ ವೇಳೆ ಅವರ ಮೇಲೆ ಅಪರಿಚಿತ ದಾಳಿಕೋರರು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅವರ ಸೋದರ ಮಾವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮನೆಯ ಎಲ್ಲ ಸದಸ್ಯರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ರೈನಾ ಅವರ ತಂದೆಯ ಸಹೋದರಿ ಆಶಾ ದೇವಿಯವರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮತ್ತೊಂದೆಡೆ ಅವರ ಚಿಕ್ಕಪ್ಪ, 58 ವರ್ಷದ ಅಶೋಕ್ ಕುಮಾರ್ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ರೈನಾರ ಅತ್ತೆ ಮತ್ತು ಅತ್ತೆಯ ಮಕ್ಕಳಾದ 32 ವರ್ಷದ ಕೌಶಲ್ ಕುಮಾರ್ ಮತ್ತು 24 ವರ್ಷದ ಅಪಿನ್ ಕುಮಾರ್ ಕೂಡ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ರೈನಾ ಅವರ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಚೆನ್ನೈ ತಂಡದ ಸಿಇಓ ವಿಶ್ವನಾಥನ್, ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಗಾಗಿ ಭಾರತಕ್ಕೆ ವಾಪಸ್ ಹೋಗುತ್ತಿದ್ದಾರೆ ಮತ್ತು ಮುಂದೆ ಆರಂಭವಾಗುವ ಐಪಿಎಲ್ ಟೂರ್ನಿಯಲ್ಲಿ ಅವರು ಲಭ್ಯವಿರುವುದಿಲ್ಲ. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸುರೇಶ್ ರೈನಾ ಮತ್ತು ಅವರ ಕುಟುಂಬಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದಿದ್ದರು.

ಶುಕ್ರವಾರಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿ ದೀಪಕ್ ಚಹರ್ ಅವರು ಸೇರಿದಂತೆ ಕೆಲ ಸಹಾಯ ಸಿಬ್ಬಂದಿಗೆ ಕೊರೊನಾ ಪಾಸಿಟವ್ ಬಂದಿತ್ತು. ಇದರಿಂದ ಶುಕ್ರವಾರದಿಂದ ಅಭ್ಯಾಸವನ್ನು ಆರಂಭ ಮಾಡಬೇಕಿದ್ದ ಚೆನ್ನೈ ತಂಡ ಸೆಪ್ಟೆಂಬರ್ 1ರವರೆಗೆ ಕ್ವಾರಂಟೈನ್‍ನಲ್ಲಿ ಇರಲು ತೀರ್ಮಾನ ಮಾಡಿತ್ತು. ಇದರ ನಡುವೆ ರೈನಾ ಕೂಡ ಹೊರಗೆ ಬಂದಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *