ರಾಜಸ್ಥಾನ ರಾಜಕೀಯ ಬಿಕ್ಕಟ್ಟು – ಬಂಡಾಯ ಶಾಸಕರನ್ನು ಸೆಳೆಯಲು ಮುಂದಾದ ‘ಕೈ’ ಹೈಕಮಾಂಡ್?

Public TV
1 Min Read

ನವದೆಹಲಿ: ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಕೊನೆಗೊಳಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಬೆಳವಣಿಗೆಗಳು ಆರಂಭಗೊಂಡಿದೆ. ಬಂಡಾಯ ಶಾಸಕ, ಮಾಜಿ ಡಿಸಿಎಂ ಸಚಿನ್ ಪೈಲಟ್ ಜೊತೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸಕಾರತ್ಮಾಕ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಅಗಸ್ಟ್ 14 ಕ್ಕೆ ವಿಧಾನಸಭೆ ಅಧಿವೇಶನ ನಡೆಯಲಿದ್ದು ಅಂದು ಸಿಎಂ ಅಶೋಕ್ ಗೆಹ್ಲೋಟ್ ಬಹುಮತ ಸಾಬೀತು ಮಾಡಬೇಕಿದೆ. ಈ ಅವಧಿಯ ಒಳಗೆ ಸಚಿನ್ ಪೈಲಟ್ ಸೇರಿದಂತೆ ಇತರೆ 18 ಮಂದಿ ಶಾಸಕರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಹೈಕಮಾಂಡ್ ಪ್ಲ್ಯಾನ್ ಮಾಡಿದೆ.

ಈಗಾಗಲೇ ಸಚಿನ್ ಪೈಲಟ್ ಜೊತೆಗೆ ಒಂದು ಹಂತದ ಮಾತುಕತೆ ನಡೆದಿದ್ದು ಸಕಾರಾತ್ಮಕ ಫಲಿತಾಂಶ ಬಂದಿದೆ ಎನ್ನಲಾಗಿದೆ. ಬಾಕಿ ಶಾಸಕರ ಜೊತೆಗೂ ಮಾತುಕತೆಗೆ ಪ್ರಯತ್ನ ನಡೆದಿದ್ದು ಒಂದೆರಡು ದಿನಗಳಲ್ಲಿ ಮಾತುಕತೆ ಅಂತಿಮ ಸ್ವರೂಪ ಪಡೆದುಕೊಳ್ಳಲಿದೆ. ಆದರೆ ಹೈಕಮಾಂಡ್ ಜೊತೆಗೆ ಸಚಿನ್ ಪೈಲಟ್ ಮಾತುಕತೆಯನ್ನು ಬಂಡಾಯ ಶಾಸಕರು ನಿರಾಕರಿಸಿದ್ದಾರೆ. ಈವರೆಗೂ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಜೈಪುರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿನ್ ಪೈಲಟ್ ಸೇರಿದಂತೆ ಬೆಂಬಲಿಗ ಶಾಸಕರ ತಲೆದಂಡಕ್ಕೆ ಆಗ್ರಹಿಸಲಾಗಿತ್ತು ಅದರಂತೆ ಹೈಕಮಾಂಡ್ ಕೂಡಾ ಸಚಿನ್ ಪೈಲಟ್ ಗೆ ಡಿಸಿಎಂ ಹಾಗೂ ರಾಜ್ಯಧ್ಯಕ್ಷ ಸ್ಥಾನದಿಂದ ಕೊಕ್ ಕೊಟ್ಟಿತ್ತು. ಬೆಂಬಲಿಗರ ಪೈಕಿ ಇಬ್ಬರು ಶಾಸಕರಿಂದ ಸಚಿವ ಸ್ಥಾನ ಕಸಿದುಕೊಳ್ಳಲಾಗಿತ್ತು.

ಸದ್ಯ ಬಹುಮತ ಸಾಬೀತು ದಿನಾಂಕ ಹತ್ತಿರವಾಗುತ್ತಿರುವ ಬೆನ್ನಲ್ಲೇ ರಾಜೀ ಸಂಧಾನ ಮತ್ತೊಮ್ಮೆ ಆರಂಭವಾಗಿದ್ದು, ಬಂಡಾಯಗಾರರನ್ನು ತೃಪ್ತಿ ಪಡಿಸುವ ಕಾರ್ಯ ಆರಂಭಗೊಂಡಿದ್ದು ಇದು ಯಾವ ತಿರುವು ಪಡೆಯಲಿದೆ ಕಾದು ನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *