ಕೊರೊನಾ ಬಂದಿದ್ದರೂ 70 ಜನರು ನಾಪತ್ತೆ – ಹಾಸನದಲ್ಲಿ 131 ಮಂದಿಗೆ ಸೋಂಕು, ಐವರು ಸಾವು

Public TV
1 Min Read

– ನಕಲಿ ನಂಬರ್, ವಿಳಾಸ ಕೊಟ್ಟು ಸೋಂಕಿತರು ಎಸ್ಕೇಪ್

ಹಾಸನ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ 131 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಇಂದು ಒಂದೇ ದಿನ ಐವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಮಯದಲ್ಲೇ, ಕೊರೊನಾ ಪಾಸಿಟಿವ್ ವರದಿ ಬಂದ 70 ಮಂದಿ ನಾಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದವರಲ್ಲಿ ಸುಮಾರು 70 ಜನ ಸಂಪರ್ಕಕ್ಕೆ ಸಿಕ್ಕಿಲ್ಲ. ತಪ್ಪು ವಿಳಾಸ ಮತ್ತು ತಪ್ಪು ಫೋನ್ ನಂಬರ್ ನೀಡಿ ಯಾಮಾರಿಸಿದ್ದಾರೆ. ಇವರಿಂದಾಗಿ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುವ ಭೀತಿ ಉಂಟಾಗಿದೆ.

ಇಂದು 131 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಹಾಸನ ತಾಲೂಕಿನಲ್ಲಿ 70, ಅರಸೀಕೆರೆ 10, ಚನ್ನರಾಯಪಟ್ಟಣ 9, ಅರಕಲಗೂಡು 20, ಹೊಳೆನರಸೀಪುರ 15, ಸಕಲೇಶಪುರ 1, ಬೇಲೂರು 5 ಮತ್ತು ಇತರ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,548ಕ್ಕೆ ಏರಿಕೆಯಾಗಿದ್ದು, 1,421 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 1,057 ಮಂದಿ ಗುಣಮುಖರಾದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಆಸ್ಪತ್ರೆಯಿಂದ ಯಾವ ಸೋಂಕಿತನು ಡಿಸ್ಚಾರ್ಜ್ ಆಗಿಲ್ಲ. 43 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಕೊರೊನಾದಿಂದ ಜಿಲ್ಲೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಹಾಸನ ತಾಲೂಕಿನ 71 ವರ್ಷದ ವೃದ್ಧ, ಅರಕಲಗೂಡು ಮೂಲದ 58 ವರ್ಷದ ಪುರುಷ, ಚನ್ನರಾಯಪಟ್ಟಣ ಮೂಲದ 50 ವರ್ಷದ ಪುರುಷ, ಬೇಲೂರು ಮೂಲದ 75 ವರ್ಷದ ವೃದ್ಧ, ಅರಸೀಕೆರೆ ಮೂಲದ 65 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 70ಕ್ಕೆ ಏರಿಕೆಯಾಗಿದೆ.

ಒಟ್ಟು 2,548 ಜನ ಸೋಂಕಿತರಲ್ಲಿ, ಚನ್ನರಾಯಪಟ್ಟಣ 435, ಆಲೂರು 94, ಅರಸೀಕೆರೆ 417, ಹಾಸನ 903, ಅರಕಲಗೂಡು 191, ಹೊಳೆನರಸೀಪುರ 249, ಸಕಲೇಶಪುರ 82, ಬೇಲೂರು 163 ಮತ್ತು ಹೊರ ಜಿಲ್ಲೆ 14 ಕೊರೊನಾ ಪ್ರಕರಣಗಳು ಕಂಡು ಬಂದಿವೆ.

Share This Article
Leave a Comment

Leave a Reply

Your email address will not be published. Required fields are marked *