ಕೊರೊನಾ ಪರೀಕ್ಷೆಗೆ ಸ್ವಾಬ್ ನೀಡದಿರಲು ಕಳಸ ಜನರ ತೀರ್ಮಾನ

Public TV
2 Min Read

ಚಿಕ್ಕಮಗಳೂರು: ಕೊರೊನಾ ಪರೀಕ್ಷೆಗೆ ಗಂಟಲ ದ್ರವ ನೀಡಿ ಹದಿನೈದರಿಂದ ಇಪ್ಪತ್ತು ದಿನವಾದರೂ ವರದಿ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಜನ ಗಂಟಲ ದ್ರವ ನೀಡದೇ ಇರಲು ತೀರ್ಮಾನಿಸಿದ್ದಾರೆ.

ಸ್ವಾಬ್ ನೀಡಿದ ಎರಡರಿಂದ ಮೂರು ದಿನಗಳಲ್ಲಿ ವರದಿ ನೀಡುವ ಭರವಸೆ ನೀಡಿದರೆ ಮಾತ್ರ ಪರೀಕ್ಷೆಗೆ ಮುಂದಾಗಲು ನಿರ್ಧರಿಸಿದ್ದಾರೆ. ಏಕೆಂದರೆ ಕಳಸದಲ್ಲಿ 20 ದಿನಗಳ ಹಿಂದೆ ಒಂದೇ ಕುಟುಂಬದ 14 ಜನ ಗಂಟಲ ದ್ರವ ನೀಡಿ ಕೊರೊನಾ ಪರೀಕ್ಷೆಗೆ ಮುಂದಾಗಿದ್ದರು. ಆದರೆ ಈ ಜನರಲ್ಲಿ ನಾಲ್ವರ ವರದಿ 3-4 ದಿನದಲ್ಲಿ ಬಂದಿತ್ತು. ಅವರಲ್ಲಿ ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟು ನಾಲ್ವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ದೃಢಪಟ್ಟ ಮೇಲೆ ಉಳಿದ ಹತ್ತು ಜನ ನಮಗೆ ನಮಗೆ ಸೋಂಕು ಇಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಉಳಿದ ಹತ್ತು ಜನರ ವರದಿ ನಿನ್ನೆ ಬಂದಿದ್ದು ಉಳಿದ ಹತ್ತು ಜನರಿಗೂ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದು ಕಳಸ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಕೋವಿಡ್ ವರದಿ ಇಲ್ಲದೆ ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಕಾರ- ಸರ್ಕಾರಿ ವೈದ್ಯ ಸಾವು

ಹತ್ತು ಜನ ಕಳೆದ ಹದಿನೈದು ದಿನಗಳಲ್ಲಿ ಎಲ್ಲಾ ಕಡೆ ಓಡಾಡಿರುತ್ತಾರೆ. ಅವರಿಂದ ಮತ್ತಷ್ಟು ಜನಕ್ಕೆ ಸೋಂಕು ತಗಲಬಹುದು ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಇನ್ನು ಮುಂದೆ ಗಂಟಲ ದ್ರವವನ್ನು ಪರೀಕ್ಷೆಗೆ ನೀಡದಿರಲು ಮುಂದಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡಿರುವ ಜನ ಸರ್ಕಾರ ಎರಡು-ಮೂರು ದಿನಗಳಲ್ಲಿ ವರದಿ ನೀಡುತ್ತೇವೆ ಎಂದರೆ ಮಾತ್ರ ಪರೀಕ್ಷೆಗೆ ಮುಂದಾಗಿ ಇಲ್ಲವಾದಲ್ಲಿ ಪರೀಕ್ಷೆಗೆ ಮುಂದಾಗಬೇಡಿ ಎಂದು ಅಭಿಯಾನ ಆರಂಭಿಸಿದ್ದಾರೆ.

ಸ್ಥಳೀಯರಿಗೆ ವರದಿ ಬರುವುದು ತಡವಾದರೆ ಪಾಸಿಟಿವ್ ಗ್ಯಾರಂಟಿ ಎಂಬಂತಾಗಿದೆ. ಕಳಸದಲ್ಲಿ ಹತ್ತುದಿನಗಳ ಹಿಂದೆ ಸ್ವಾಬ್ ನೀಡಿದ್ದ ಪೊಲೀಸರ ವರದಿ ಕೂಡ ನಿನ್ನೆ ಬಂದಿದ್ದು ಅವರಿಗೂ ಸೋಂಕು ದೃಢಪಟ್ಟಿದೆ. ಹೀಗೆ ಹತ್ತು-ಹನ್ನೆರಡು ದಿನಗಳ ಬಳಿಕ ಪರೀಕ್ಷೆ ವರದಿ ಬರುತ್ತಿರುವುದರಿಂದ ಆತಂಕಕ್ಕೀಡಾಗಿರುವುದು ಕಳಸ ಜನ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಪರೀಕ್ಷೆಗೆ ಗಂಟಲ ದ್ರವ ನೀಡದಿರಲು ಮುಂದಾಗಿದ್ದಾರೆ. ಗಂಟಲ ದ್ರವದ ವರದಿಯನ್ನು ಎರಡು ಮೂರು ದಿನಗಳ ಒಳಗಡೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *