ಕಾಂಗ್ರೆಸ್‍ನವರು ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ ಕೆಲಸ ಮಾಡ್ತಿದಾರೆ: ಆರ್.ಅಶೋಕ್

Public TV
2 Min Read

ಬೆಂಗಳೂರು: ಇಂಥ ಸಂಕಷ್ಟದ ವೇಳೆಯಲ್ಲಿ ಲೆಕ್ಕ ಕೊಡಿ ಎನ್ನುವುದು ಸರಿಯಲ್ಲ. ಕಾಂಗ್ರೆಸ್‍ನವರು ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಬೆಂಗಳೂರು ದಕ್ಷಿಣ ವಲಯದ ಸಭೆ ಬಳಿಕ ಮಾತನಾಡಿದ ಅವರು, ವೆಂಟಿಲೇಟರ್ ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದರು. ಇಂಥ ಸಂಕಷ್ಟದ ವೇಳೆ ಲೆಕ್ಕ ಕೊಡಿ ಎಂದು ಕೇಳುವುದು ಸರಿಯಲ್ಲ. ಸಲಕರಣೆಗಳ ಬೆಲೆ ಬದಲಾಗುತ್ತಿರುತ್ತದೆ. ಪ್ರಸಕ್ತ ದರದಂತೆ ಖರೀದಿ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಆತುರ ಬಿದ್ದು ಗೋತ್ರ ಕೆಡಿಸಿಕೊಳ್ಳೋದು ಬೇಡ. ಲೆಕ್ಕ ಕೇಳಲು ಒಂದು ಸಮಯ ಬರುತ್ತೆ, ಆಗ ಕೇಳಿ ಎಂದು ಹೇಳಿದ್ದಾರೆ.

ಅಧಿವೇಶನ ವೇಳೆ ನಿಮ್ಮ ಮನೆಮನೆಗೆ ಲೆಕ್ಕ ಕಳಿಸುತ್ತೇವೆ. ಆಗ ನೀವು ಲೆಕ್ಕನಾದರೂ ಕೇಳಿ ನಾಟಕವಾದರೂ ಮಾಡಿ. 400-500 ಕೋಟಿ ರೂ.ಗಷ್ಟೇ ವೈದ್ಯಕೀಯ ಸಲಕರಣೆಗಳ ಖರೀದಿ ಮಾಡಲಾಗಿದೆ. ಕಾಂಗ್ರೆಸ್ ಆರೋಪದಂತೆ 3000 ಸಾವಿರ ಕೋಟಿ ರೂ. ವೆಚ್ಚ ಮಾಡಿಲ್ಲ. ಜೆಡಿಎಸ್ ನೋಡಿ ಕಾಂಗ್ರೆಸ್ ಕಲಿಯಬೇಕಿದೆ. ಜೆಡಿಎಸ್ ಸಮಯ ಪ್ರಜ್ಞೆ ತೋರಿಸುತ್ತಿದೆ, ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್‍ನವರು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಭೂಪಟದಿಂದ ಕಾಂಗ್ರೆಸ್ ಕಳಚಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ದಕ್ಷಿಣ ವಲಯದ ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆಯನ್ನು ತಲಾ ಒಬ್ಬೊಬ್ಬ ಕಾರ್ಪೊರೇಟ್ ಹೆಗಲಿಗೆ ಹೊರಿಸಲಾಗಿದೆ. ಇವರ ಜೊತೆ ಒಬ್ಬೊಬ್ಬ ಪಾಲಿಕೆ ಅಧಿಕಾರಿ, ಪೊಲೀಸ್ ಸಿಬ್ಬಂದಿ ಇರುತ್ತಾರೆ. ವಾರ್ಡ್‍ಗೆ ತಲಾ ಹತ್ತು ಸ್ವಯಂ ಸೇವಕರ ನೇಮಕ ಮಾಡಲಾಗುವುದು. ಪ್ರತಿ ವಾರ್ಡ್‍ಗೂ 25 ಲಕ್ಷ ರೂ. ಕೋವಿಡ್-19 ನಿಧಿ ಇದೆ. ಈ ನಿಧಿ ಬಳಕೆ ಸಂಬಂಧ ನೀತಿ ನಿಯಮ ರೂಪಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗುವುದು ಎಂದರು.

ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾರಿ ಕೇಸ್ ಇರುವ ರೋಗಿಗಳು ಹೆಚ್ಚು ಸಾವನ್ನಪ್ಪುತ್ತಿದ್ದು, ಇವರನ್ನು ಕರೆದೊಯ್ಯುವ ಅಂಬುಲೆನ್ಸ್ ನಲ್ಲಿ ಕೃತಕ ಉಸಿರಾಟ ಯಂತ್ರ ಖರೀದಿಗೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಚರ್ಚಿಸಿ ಯಂತ್ರಗಳ ಖರೀದಿ ಮಾಡಲಾಗುವುದು. ವಾರ್ಡ್‍ವಾರು ಕೃತಕ ಉಸಿರಾಟ ಯಂತ್ರಗಳ ಖರೀದಿ ಮಾಡಲಾಗುವುದು ಎಂದರು.

ಕೆಲವು ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆ ಕೊಡುವುದರಿಂದ ವಿನಾಯಿತಿ ಕೇಳಿ ಪತ್ರ ಬರೆಯುತ್ತಿದ್ದಾರೆ. ಇಂಥದ್ದಕ್ಕೆಲ್ಲ ವಿನಾಯಿತಿ ಸಾಧ್ಯವಿಲ್ಲ. ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಓಡಿ ಹೋಗಬಾರದು. ಖಾಸಗಿ ಆಸ್ಪತ್ರೆಗಳು ಈಗ ಸಮಾಜದ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ನುಣುಚಿಕೊಳ್ಳುವ ಯತ್ನ ಮಾಡಬಾರದು. ಸಹಕಾರ ಕೊಡದ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು, ಅದನ್ನು ಸಂಪೂರ್ಣ ಕೋವಿಡ್-19 ಆಸ್ಪತ್ರೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಟೆಲಿ ಕನ್ಸಲ್ಟೇಷನ್ ಸೇವೆ ನಮ್ಮ ವಲಯದಲ್ಲಿ ಆರಂಭ ಮಾಡುತ್ತಿದ್ದೇವೆ. ಹೋಮ್ ಐಸೋಲೇಷನ್ ನಲ್ಲಿರುವವರಿಗೆ ವೈದ್ಯರು ಅಗತ್ಯ ಸಲಹೆ ಸೂಚನೆ ಕೊಡುತ್ತಾರೆ. ಇದರ ಸಹಾಯವಾಣಿ ನಂಬರ್ ನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಮಹಾರಾಷ್ಟ್ರ, ದೆಹಲಿಯಲ್ಲಿ ಪ್ರವಾಹ ಉಂಟಾಗುತ್ತಿದೆ. ನಮ್ಮ ರಾಜ್ಯದಲ್ಲೂ ಪ್ರವಾಹ ಎಲ್ಲೆಲ್ಲಿ ಆಗುತ್ತೆ ಎಂಬ ಬಗ್ಗೆ ಸದ್ಯದಲ್ಲೇ ಸಭೆ ಕರೆಯುತ್ತೇನೆ. ಡಿಸಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *