‘ಧನ್ಯವಾದಗಳು ಅಜ್ಜಿ’ – ಸಾಲುಮರದ ತಿಮ್ಮಕ್ಕನನ್ನು ನೆನೆದ ಭಜ್ಜಿ

Public TV
2 Min Read

 ನವದೆಹಲಿ: ಭಾರತದ ಕ್ರಿಕೆಟರ್ ಮತ್ತು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕರುನಾಡಿನ ಹೆಮ್ಮೆಯ ಮಹಿಳೆ ಸಾಲುಮರದ ತಿಮ್ಮಕ್ಕರನ್ನು ನೆನೆದು ಟ್ವೀಟ್ ಮಾಡಿದ್ದಾರೆ.

ಭಜ್ಜಿ ಕೊರೊನಾ ಲಾಕ್‍ಡೌನ್‍ನಿಂದ ಕ್ರಿಕೆಟ್‍ನಿಂದ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಈ ವೇಳೆ ಸದಾ ಸಾಮಾಜಿಕ ಜಾಲತಣದಲ್ಲಿ ಸಕ್ರಿಯವಾಗಿರುವ ಹರ್ಭಜನ್ ಅವರು, ತಮ್ಮ ಟ್ವಿಟ್ಟರ್ ನಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಕರ್ನಾಟಕದ ವೃಕ್ಷಮಾತೆ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕ ಅವರಿಗೆ ಧನ್ಯವಾದ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ನೆನಪಿಸಿಕೊಂಡು ಟ್ವೀಟ್ ಮಾಡಿರುವ ಹರ್ಭಜನ್, ಇವರು 73,000 ಸಾವಿರಕ್ಕೂ ಅಧಿಕ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಆದರೆ ನಮ್ಮಲ್ಲಿ ಕೆಲವರಿಗೆ ಮಾತ್ರ ಇವರ ಬಗ್ಗೆ ಗೊತ್ತು. ಸಾಲುಮರದ ತಿಮ್ಮಕ್ಕನ ರೀತಿಯಲ್ಲಿ ನಾವು ಕೂಡ ಕಮ್ಮಿ ಎಂದರು ಒಂದು ಮರವನ್ನು ನೆಟ್ಟು ಬೆಳಸಬೇಕು. ಧನ್ಯವಾದಗಳು ಅಜ್ಜಿ ಎಂದು ಬರೆದು ಸಾಲುಮರದ ತಿಮ್ಮಕ್ಕ ಅವರು ಪ್ರಶಸ್ತಿ ಪತ್ರ ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಪರಿಸರದ ಮೇಲಿನ ಕಾಳಜಿಯಿಂದ ಸಾಲುಮರದ ತಿಮ್ಮಕ್ಕ ಮಾಡಿದ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರ ಕಳೆದ ವರ್ಷ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿತ್ತು. ಸಾಲು ಮರದ ತಿಮ್ಮಕ್ಕನವರು ನೆಟ್ಟ ಸಾವಿರಾರು ಮರಗಳು ಕುದೂರಿನಿಂದ ಹುಲಿಕಲ್‍ನ ರಾಜ್ಯ ಹೆದ್ದಾರಿಯಲ್ಲಿ ಇಂದಿಗೂ ಇವೆ. ಈಗ ಇವುಗಳನ್ನು ಬೆಳೆಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡಿದೆ. ಆದ್ರೆ ಇಳಿ ವಯಸಿನಲ್ಲೂ ತಿಮ್ಮಕ್ಕ ಅವರು ಮಾತ್ರ ಪರಿಸರ ರಕ್ಷಣೆ, ಕಾಳಜಿಯನ್ನು ಮರೆತಿಲ್ಲ.

ಸ್ವಾರ್ಥವಿಲ್ಲದೆ ಪರಿಸರಕ್ಕಾಗಿ ಸೇವೆ ಸಲ್ಲಿಸಿದ ತಿಮ್ಮಕ್ಕ ಅವರ ಕಾರ್ಯವನ್ನು ಮೆಚ್ಚಿ ಈಗಾಗಲೇ ಹಲವು ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿದೆ.

ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುವ ಹರ್ಭಜನ್ ಸಿಂಗ್ ಅವರು, ಈ ಬಾರಿ ಐಪಿಎಲ್ ಆಡಲು ಬಹಳ ಉತ್ಸುಕರಾಗಿದ್ದರು. ಆದರೆ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಐಪಿಎಲ್ ಮುಂದಕ್ಕೆ ಹೋಗಿದೆ. ಈ ನಡುವೆ ಭಜ್ಜಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು, ಫ್ರೆಂಡ್‍ಶಿಫ್ ಎಂಬ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡಿಗ ಅರ್ಜುನ್ ಸರ್ಜಾ ಕೂಡ ನಟಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *