ಹಾಸನ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಲಾಕ್‍ಡೌನ್ ಮಾಡು ನಿರ್ಧರಿಸಲಾಗಿದ್ದು, ಚನ್ನರಾಯಪಟ್ಟಣದಲ್ಲೇ 227 ಪ್ರಕರಣಗಳು ಪತ್ತೆಯಾಗಿದ್ದು, ಈ ಹಿನ್ನೆಲೆ ಸ್ವಯಂಪ್ರೇರಿತವಾಗಿ ಲಾಕ್‍ಡೌನ್ ಮಾಡಲು ತಾಲೂಕಿನ ಜನತೆ ಮುಂದಾಗಿದ್ದಾರೆ.
ಕೊರೊನಾ ವಾರಿಯರ್ಸ್ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ 541 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 255 ಜನ ಗುಣಮುಖರಾಗಿದ್ದಾರೆ. ಇನ್ನೂ 278 ಆ್ಯಕ್ಟಿವ್ ಪ್ರಕರಣಗಳಿವೆ. ಈ ವರೆಗೆ 8 ಜನ ಮೃತಪಟ್ಟಿದ್ದಾರೆ. ಹೀಗಾಗಿ ಹಾಸನ ಜಿಲ್ಲೆಯ ಜನ ಸರ್ಕಾರದ ಆದೇಶ ಇಲ್ಲದಿದ್ದರೂ ಸ್ವಯಂ ಪ್ರೇರಿತವಾಗಿ ನಯಾ ಲಾಕ್‍ಡೌನ್ ನಿಯಮಗಳನ್ನು ರೂಪಿಸಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ಅಂದರೆ 227 ಪ್ರಕರಣ ದಾಖಲಾಗಿದ್ದು, ಸಮುದಾಯಕ್ಕೆ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಚನ್ನರಾಯಪಟ್ಟಣ ತಾಲೂಕನ್ನು ಇಂದಿನಿಂದ 14 ದಿನಗಳ ಕಾಲ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ. ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಅಗತ್ಯ ವಸ್ತು ಕೊಳ್ಳಲು 12 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ.
ಚನ್ನರಾಯಪಟ್ಟಣ ಅಷ್ಟೇ ಅಲ್ಲದೆ ಹಾಸನ, ಹೊಳೆನರಸೀಪುರ, ಸಕಲೇಶಪುರ, ಅರಸೀಕೆರೆಯಲ್ಲಿ ಕೂಡ ನಯಾ ಲಾಕ್‍ಡೌನ್‍ಗೆ ಸ್ವಯಂ ಪ್ರೇರಿತವಾಗಿ ನಿರ್ಧರಿಸಲಾಗಿದೆ. ಅರಸೀಕೆರೆಯಲ್ಲಿ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆವರೆಗೆ, ಹೊಳೆನರಸೀಪುರದಲ್ಲಿ ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆವರೆಗೆ, ಸಕಲೇಶಪುರದಲ್ಲಿ ಮಧ್ಯಾಹ್ನ ಮೂರು ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ನಿರ್ಧಾರ ಮಾಡಿದ್ರೆ, ಹಾಸನದಲ್ಲಿ ಬೆಳಗ್ಗೆ ಆರರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ಚಿಂತಿಸಲಾಗಿದೆ. ಶನಿವಾರ, ಭಾನುವಾರ ಸಂಪೂರ್ಣ ಲಾಕ್‍ಡೌನ್‍ಗೆ ತೀರ್ಮಾನ ಕೈಗೊಳ್ಳಲಾಗಿದೆ. ಅಗತ್ಯ ವಸ್ತುಗಳನ್ನು ಬಿಟ್ಟು ಉಳಿದ ವಸ್ತುಗಳ ಮಾರಾಟಕ್ಕೆ ಸ್ವಯಂ ಪ್ರೇರಿತವಾಗಿ ಸಮಯ ನಿಗದಿ ಮಾಡಿಕೊಳ್ಳಲಾಗಿದೆ.