– ಇನ್ನೂ ಹಲವರ ವರದಿ ಬರುವುದು ಬಾಕಿ
– ತಲೆನೋವಾದ ರೋಗಿ ಸಂಖ್ಯೆ 8663, 11328
ರಾಯಚೂರು: ಜಿಲ್ಲೆಗೆ ಈಗ ಬಟ್ಟೆ ಕಂಟಕ ಎದುರಾಗಿದೆ. ಬಟ್ಟೆ ಅಂಗಡಿ ಕೆಲಸಗಾರರಿಗೆ ತಗುಲಿದ ಕೊರೊನಾ ಸೋಂಕು ಗ್ರಾಹಕರಿಗೂ ಹರಡಿದೆ. ಒಂದೇ ದಿನ 14 ಜನ ಗ್ರಾಹಕರಲ್ಲಿ ಸೋಂಕು ಧೃಡಪಟ್ಟಿದೆ. ಇನ್ನೂ ಸಾಕಷ್ಟು ಜನರ ವರದಿ ಬರುವುದು ಬಾಕಿಯಿದ್ದು, ಬಟ್ಟೆ ಕಂಟಕ ಇನ್ನೂ ಎಲ್ಲಿಗೆ ಹೋಗಿ ನಿಲ್ಲುತ್ತೊ ಎಂಬ ಆತಂಕ ಎದುರಾಗಿದೆ. ರೋಗಿ ಸಂಖ್ಯೆ 8663 ರ ಮಹಿಳೆಯಿಂದ ಜಿಲ್ಲೆಯಲ್ಲಿ ಬಟ್ಟೆ ಕಂಟಕ ಸೃಷ್ಟಿಯಾಗಿದೆ.
ರಾಯಚೂರಿನ ಸಿಂಧನೂರು ಪಟ್ಟಣದ ಅಮರದೀಪ ಬಟ್ಟೆ ಅಂಗಡಿ ಕೊರೊನಾ ವೈರಸ್‍ನ ಹಾಟ್‍ಸ್ಪಾಟ್ ಆಗಿದೆ. ಮೊನ್ನೆ ವರೆಗೆ ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ತಾಲೂಕು ಸೇಫ್ ಎನ್ನುವಾಗಲೇ ರೋಗಿ ನಂ.8663 ಮಹಿಳೆಯ ಸಂಪರ್ಕದಿಂದ ಬಟ್ಟೆ ಅಂಗಡಿಯ ಮೂವರು ಕೆಲಸಗಾರರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಬಟ್ಟೆ ಅಂಗಡಿಯಿಂದ ಈಗ ಒಂದೇ ಬಾರಿಗೆ 14 ಜನ ಸಂಪರ್ಕಿತರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನೂ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಸಂಖ್ಯೆ ದೊಡ್ಡದಿದ್ದು ಇಡೀ ನಗರ ಆತಂಕಕ್ಕೊಳಗಾಗಿದೆ.
ಬಟ್ಟೆ ಅಂಗಡಿಯ ಮೂವರು ಸೋಂಕಿತರಲ್ಲಿ ಓರ್ವ ತಾಲೂಕಿನ ತುಂಬೆಲ್ಲ ಓಡಾಡಿದ್ದಾನೆ, ಮದುವೆ ಸಮಾರಂಭಕ್ಕೂ ಹೋಗಿದ್ದಾನೆ. ಹೀಗಾಗಿ ಇವನ ಸಂಪರ್ಕಿತರ ಪಟ್ಟಿ ದೊಡ್ಡದಾಗಿದೆ. ಮದುವೆ ಸೀಜನ್ ಆಗಿರುವುದರಿಂದ ಬಟ್ಟೆ ಅಂಗಡಿಗೆ ಸಾಕಷ್ಟು ಜನ ಬಂದು ಹೋಗಿದ್ದಾರೆ. ಅವರಲ್ಲಿ ಅದೆಷ್ಟು ಜನರಿಗೆ ಸೋಂಕು ತಗುಲಿದೆಯೋ ಅವರನ್ನು ಪತ್ತೆ ಹಚ್ಚುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಅಂಗಡಿ ಮಾಲೀಕನಿಗೂ ಸೋಂಕು ತಗುಲಿದ್ದು, ಈಗಾಗಲೇ ಬಟ್ಟೆ ಅಂಗಡಿಯನ್ನು ಸೀಲ್ ಮಾಡಲಾಗಿದೆ. ಉಳಿದ ಸಂಪರ್ಕಿತರ ಪತ್ತೆಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಐಎಲ್‍ಐ, ಸಾರಿ ಹಾಗೂ ಸಂಪರ್ಕಿತರಿಗೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಸಮುದಾಯಕ್ಕೆ ಹರಡುವ ಮೊದಲನೇ ಹಂತದಲ್ಲಿದ್ದೇವೆ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ.
ರಾಯಚೂರಿನಲ್ಲಿ ಒಂದೇ ದಿನ ಒಟ್ಟು 41 ಪಾಸಿಟಿವ್ ಪ್ರಕರಣಗಳು ಧೃಡವಾಗಿದ್ದು, ಇದರಲ್ಲಿ 14 ಬಟ್ಟೆ ಅಂಗಡಿ ಪ್ರಕರಣ ಸೇರಿ 17 ಪ್ರಕರಣ ಸಿಂಧನೂರಿನಲ್ಲೇ ದಾಖಲಾಗಿವೆ. ಮಾನ್ವಿಯಲ್ಲಿ ರೋಗಿ ನಂ.11328 ರ ಸಂಪರ್ಕದಿಂದ 11 ಪ್ರಕರಣ ಸೇರಿ ಒಟ್ಟು 16 ಪ್ರಕರಣ ದಾಖಲಾಗಿವೆ. ರಾಯಚೂರಿನಲ್ಲಿ ಎರಡು ಸಾರಿ, ಒಂದು ಐಎಲ್‍ಐ ಹಾಗೂ ತೆಲಂಗಾಣ, ಮಹಾರಾಷ್ಟ್ರ, ಸೌದಿ ಅರೇಬಿಯಾ ಟ್ರಾವೆಲ್ ಹಿಸ್ಟರಿ ಇರುವ ಒಂದೊಂದು ಪ್ರಕರಣಗಳು ಸೇರಿ ಒಟ್ಟು 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಲಿಂಗಸುಗೂರಿನಲ್ಲಿ ಎರಡು ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು 41 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 559 ಕ್ಕೇರಿದೆ.
ರೋಗಿ ನಂ.8663 ರಿಂದ ಇದುವರೆಗೆ 21 ಜನರಿಗೆ ಸೋಂಕು ತಗುಲಿದೆ. ರೋಗಿ ನಂ.11328 ರ ಸಂಪರ್ಕದಿಂದ 11 ಜನರಿಗೆ ಪಾಸಿಟಿವ್ ಬಂದಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಜಿಲ್ಲೆಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಜಿಲ್ಲೆಯ ಸರ್ಕಾರಿ ಕಚೇರಿ, ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಫಾರ್ಮಾ ಕಂಪನಿಗಳಲ್ಲೂ ಕೊರೊನಾ ಆತಂಕ ಹೆಚ್ಚಾಗಿದೆ.