ಬೆಂಗಳೂರು: ಈ ವಾರದಿಂದ ಬೆಂಗಳೂರಿನಲ್ಲಿ ಪ್ರತಿದಿನವೂ ಸೋಂಕಿತರ ಸಂಖ್ಯೆ 100ರ ಗಡಿ ದಾಟುತ್ತಿದೆ. ಈ ಸಂಖ್ಯೆಯ ಜೊತೆ ನಗರದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಹೌದು. ಬಿಬಿಎಂಪಿ ವಾರ್ ರೂಂ ಜೂನ್ 24 ರಂದು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 1,685ಕ್ಕೆ ಏರಿಕೆಯಾಗಿದ್ದು, 75 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 428 ಮಂದಿ ಗುಣಮುಖರಾಗಿದ್ದು 1,182 ಸಕ್ರೀಯ ಪ್ರಕರಣಗಳಿವೆ. ಐಸಿಯುನಲ್ಲಿ 63 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಸಾವು ಕಲಬುರಗಿಯಲ್ಲಿ ಆಗಿದ್ದು 13 ಮಂದಿ ಮೃತಪಟ್ಟಿದ್ದಾರೆ. ಸಾವಿರಕ್ಕಿಂತ ಹೆಚ್ಚು ಸೋಂಕಿತರು ದೃಢಪಟ್ಟ ಜಿಲ್ಲೆಗಳ ಪೈಕಿ ಡಿಸ್ಚಾರ್ಜ್ ಆದ ರೋಗಿಗಳ ಸಂಖ್ಯೆ ಜಾಸ್ತಿ ಇದ್ದರೆ ಬೆಂಗಳೂರಿನಲ್ಲಿ ಬಿಡುಗಡೆಯಾದವರಿಗಿಂತ ಸಕ್ರಿಯ ಪ್ರಕರಣಗಳೇ ಜಾಸ್ತಿಯಿದೆ.
ಉಡುಪಿಯಲ್ಲಿ 1,102 ಮಂದಿಗೆ ಸೋಂಕು ಬಂದಿದ್ದರೆ 978 ಮಂದಿ ಬಿಡುಗಡೆಯಾಗಿದ್ದು, 122 ಸಕ್ರಿಯ ಪ್ರಕರಣಗಳಿವೆ. ಕಲಬುರಗಿಯಲ್ಲಿ 1254 ಮಂದಿಗೆ ಸೋಂಕು ದೃಢವಾಗಿದ್ದರೆ 829 ಮಂದಿ ಬಿಡುಗಡೆಯಾಗಿದ್ದು, 412 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾವ ವಯಸ್ಸಿನವರು ಎಷ್ಟು ಮಂದಿ ಬಲಿ?
20 ರಿಂದ 29 – 02
30 ರಿಂದ 39 – 07
40 ರಿಂದ 49 – 10
50 ರಿಂದ 59 – 19
60 ರಿಂದ 69 – 24
70 ಮೇಲ್ಪಟ್ಟವರು – 13
ಕಾರಣ ಏನು?
75 ಮಂದಿಯಲ್ಲಿ 51 ಮಂದಿ ವಿಕ್ಟೋರಿಯಾ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಈ ರೋಗಿಗಳ ಪೈಕಿ ಹಲವು ಮಂದಿ ಕಿಡ್ನಿ ಸಮಸ್ಯೆ, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದರು . ಈ ಪೈಕಿ ಕೆಲ ರೋಗಿಗಳು ಆಸ್ಪತ್ರೆಗೆ ದಾಖಲಾದ 8 ಗಂಟೆಯಲ್ಲಿ ಮೃತಪಟ್ಟಿದ್ದಾರೆ.
ರೋಗಿಗಳ ಕೊನೆ ಕ್ಷಣದಲ್ಲಿ ಯಾವುದೋ ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ವೇಳೆ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಫಲಿತಾಂಶ ಪಾಸಿಟಿವ್ ಬಂದ ನಂತರ ಅವರನ್ನು ಅಂಬುಲೆನ್ಸ್ ಮೂಲಕ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಮೊದಲೇ ರೋಗದಿಂದ ಅವರ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ರೋಗ ಉಲ್ಭಣವಾಗುವಾಗಲೇ ಅವರ ಶಿಫ್ಟ್ ಆಗುವ ಕಾರಣ ಸ್ಥಿತಿ ಗಂಭೀರವಾಗಿರುತ್ತದೆ. ನಂತರ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಿದರೂ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ .
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ರವಿ ಪ್ರತಿಕ್ರಿಯಿಸಿ, ದಾಖಲಾಗುವ ಹಲವು ಮಂದಿ ಉಸಿರಾಟದ ಸಮಸ್ಯೆಯಿಂದ(ಸಾರಿ) ಬಳಲುತ್ತಿರುತ್ತಾರೆ. ಸಾರಿಯಿಂದ ಬಳಲುವ ರೋಗಿಗಳು ಮೊದಲೇ ದಾಖಲಾದರೆ ಅವರನ್ನು ಐಸಿಯುನಲ್ಲಿ ಇರಿಸುವ ಮೂಲಕ ಬದುಕಿಸಬಹುದು.14-15 ರೋಗಿಗಳು ಗಂಭೀರ ಸ್ಥಿತಿ ಇದ್ದಾಗ ದಾಖಲಾಗಿದ್ದು ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.