ಕೊರೊನಾ ವೈರಸ್‌ – ರೋಗಿಯ ಜೀವ ಉಳಿಸಬಲ್ಲ ಮೊದಲ ಔಷಧಿ ಲಭ್ಯ

Public TV
2 Min Read

ಲಂಡನ್‌: ಸದ್ಯಕ್ಕೆ ಕೊರೊನಾ ವೈರಸ್‌ಗೆ ಔಷಧಿ ಲಭ್ಯವಿಲ್ಲ. ವಿಶ್ವದ ವಿವಿಧ ದೇಶಗಳಲ್ಲಿ ಔಷಧಿ ಕಂಡು ಹಿಡಿಯುವ ಕಾರ್ಯ ನಡೆಯುತ್ತಿದೆ. ಆದರೆ ಇಂಗ್ಲೆಂಡ್‌ ಸಂಶೋಧಕರು ಒಂದು ಡ್ರಗ್ಸ್‌ ನೀಡುವ ಮೂಲಕ ಕೋವಿಡ್‌ 19 ಗುಣಪಡಿಸಬಹುದು ಎಂದು ಹೇಳಿದ್ದಾರೆ.

ಹೌದು. ವಿಶ್ವದೆಲ್ಲೆಡೆ ಕಡಿಮೆ ಬೆಲೆಗೆ ಸಿಗುವ ʼಡೆಕ್ಸಮೆಥಾಸೊನ್ʼ(Dexamethasone) ನೀಡಿದ್ರೆ ಕೋವಿಡ್‌ 19 ನಿಂದ ಬಳಲುತ್ತಿರುವ ರೋಗಿ ಗುಣವಾಗುವ ಸಾಧ್ಯತೆ ಹೆಚ್ಚು  ಎಂದು ಸಂಶೋಧಕರು ತಿಳಿಸಿದ್ದಾರೆ.

ಡೆಕ್ಸಮೆಥಾಸೊನ್ ನೀಡಿದ್ದರಿಂದ ಇಂಗ್ಲೆಂಡ್‌ನಲ್ಲಿ ಸಾವಿನ ದವಡೆಯಲ್ಲಿದ್ದ ಸುಮಾರು 5 ಸಾವಿರ ರೋಗಿಗಳನ್ನು ಪಾರುಮಾಡಲಾಗಿದೆ. 20 ರೋಗಿಗಳ ಪೈಕಿ 19 ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಆದರೆ ಇತರೇ ರೋಗಗಳಿಂದಾಗಿ ಹೈ ರಿಸ್ಕ್‌ ನಲ್ಲಿರುವ ರೋಗಿಗಳಿಗೆ ವೆಂಟಿಲೇಟರ್‌ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ತಂಡವೊಂದು ಡೆಕ್ಸಮೆಥಾಸೊನ್ ನೀಡಿದ 2 ಸಾವಿರ ಆಸ್ಪತ್ರೆಯ ರೋಗಿಗಳು ಜೊತೆ ಈ ಔಷಧಿ ನೀಡದ 4 ಸಾವಿರ ರೋಗಿಗಳನ್ನು ಹೋಲಿಕೆ ಮಾಡಿ ಅಧ್ಯಯನ ನಡೆಸಿದೆ.

ಈ ತಂಡದಲ್ಲಿದ್ದ ಪ್ರೊ. ಪೀಟರ್‌ ಹಾರ್ಬಿ ಪ್ರತಿಕ್ರಿಯಿಸಿ, ಸದ್ಯ ಸಾವನ್ನು ತಪ್ಪಿಸಲು ಇರುವ ಏಕೈ ಔಷಧಿ ಇದು. ಈ ಡ್ರಗ್ಸ್‌ ಸಾವಿನ ಪ್ರಮಾಣವನ್ನು ಭಾರೀ ಸಂಖ್ಯೆಯಲ್ಲಿ ಕಡಿಮೆ ಮಾಡುತ್ತದೆ. ಕೊರೊನಾ ವೈರಸ್‌ ಲಸಿಕೆ ವಿಚಾರದಲ್ಲಿ ಇದೊಂದು ಮಹತ್ವದ ತಿರುವ ನೀಡಬಲ್ಲ ವಿಚಾರ ಎಂದು ತಿಳಿಸಿದ್ದಾರೆ.

ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಈ ಔಷಧಿಯಿಂದ ಖಂಡಿತವಾಗಿಯೂ ಲಾಭವಿದೆ. ಒಂದು ಡೆಕ್ಸಮೆಥಾಸೊನ್ ಗೆ 5 ಪೌಂಡ್‌(481. ರೂ.) ಖರ್ಚಾಗಬಹುದು. ಹೀಗಾಗಿ 10 ದಿನಗಳಿಗೆ 35 ಪೌಂಡ್‌(3,400 ರೂ.) ಆಗಬಹುದು. ಈ ಡ್ರಗ್ಸ್‌ ವಿಶ್ವದೆಲ್ಲೆಡೆ ಲಭ್ಯವಿದೆ. ವಿಶೇಷವಾಗಿ ಬಡ ರಾಷ್ಟ್ರಗಳಿಗೆ ಇದರಿಂದ ಬಹಳ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.

1960ರಿಂದ ಡೆಕ್ಸಮೆಥಾಸೊನ್ ಔಷಧಿಯನ್ನು ಬಳಕೆ ಮಾಡಲಾಗುತ್ತದೆ. ವಿಶೇಷವಾಗಿ ಅಸ್ತಮಾ ಸೇರಿದಂತೆ ಇತರೇ ರೋಗಗಳಿಗೆ ಇದನ್ನು ನೀಡಲಾಗುತ್ತಿದೆ. ಕಳೆದ ಮಾರ್ಚ್‌ ತಿಂಗಳಿನಿಂದಲೇ ಈ ಔಷಧಿಯನ್ನು ಇಂಗ್ಲೆಂಡಿನಲ್ಲಿ ನೀಡಲಾಗುತ್ತಿದೆ.

ಈಗಾಗಲೇ ಕೋವಿಡ್‌ 19ಗೆ ಮಲೇರಿಯಾ ಜ್ವರಕ್ಕೆ ನೀಡುವ ಹ್ರೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಯನ್ನು ನೀಡಲಾಗುತ್ತಿದೆ. ಬಹಳಷ್ಟು ಕಡೆ ಇದು ಯಶಸ್ವಿಯಾಗಿದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಇದರ ಬಳಕೆ ಅನುಮೋದನೆ ನೀಡಿದೆ. ಆದರೆ ಈ ಮಾತ್ರೆ ಸೇವನೆಯಿಂದ ಹೃದಯ ಸಮಸ್ಯೆ ಸೇರಿದಂತೆ ಹಲವು ಅಡ್ಡ ಪರಿಣಾಮಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಮತ್ತು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *