‘ರಸ್ತೆಯಲ್ಲಿ ಕೈ ಅಡ್ಡಹಾಕಿದ್ರೂ ಚಿರು ಕಾರು ನಿಲ್ಲಿಸಿ ಸೆಲ್ಫಿ ಕೊಡ್ತಿದ್ದರು’

Public TV
1 Min Read

– ಚಿರು ಅಕಾಲಿಕ ನಿಧನಕ್ಕೆ ಗ್ರಾಮಸ್ಥರು ಬೇಸರ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಹಠಾತ್ ನಿಧನ ಚಿತ್ರರಂಗ ಸೇರಿದಂತೆ ಹಲವಾರು ಮಂದಿ ಕಂಬನಿ ಮಿಡಿಯುವಂತೆ ಮಾಡಿದೆ. ಚಿರು ಅವರ ಒಳ್ಳೆಯ ವ್ಯಕ್ತಿತ್ವವನ್ನು ಜನ ಕೊಂಡಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಚಿರು ಬಗ್ಗೆ ಗ್ರಾಮಸ್ಥರು ಮಾತನಾಡಿ, ರಸ್ತೆಯಲ್ಲಿ ಕಾರಿಗೆ ಕೈ ಅಡ್ಡ ಹಾಕಿದರೂ ಅವರು ಕಾರು ನಿಲ್ಲಿಸಿ ಸೆಲ್ಫಿ ಕೊಡುತ್ತಿದ್ದರು. ಅಲ್ಲದೆ ಗ್ರಾಮಸ್ಥರ ಜೊತೆಗೆ ಮಾತಾಡುತ್ತಿದ್ದಂತಹ ವ್ಯಕ್ತಿ ಇಂದು ನಮ್ಮನ್ನ ಅಗಲಿದ್ದಾರೆ ಎಂದರೆ ಅರಗಿಸಿಕೊಳ್ಳಲಾಗದಂತಹ ಸತ್ಯ ಎಂದು ಕಣ್ಣೀರು ಹಾಕಿದ್ದಾರೆ.

ಜನವರಿ 19 ರಂದು ನಡೆದಿದ್ದ ಬೀಗರ ಔತಣಕೂಟದಲ್ಲಿ ಫಾರ್ಮ್ ಹೌಸ್ ಗೆ ಬಂದಿದ್ದರು. ನಮಗೆ ಬಹಳ ನೋವಾಗ್ತಿದೆ. ಚಿರಂಜೀವಿ ಅವರು ಬಹಳ ಒಳ್ಳೆಯ ಮನುಷ್ಯ. ಇಲ್ಲಿಯವರೆಗೆ ಮೂರು-ನಾಲ್ಕು ಬಾರಿ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಸರ್ಜಾ ಸರ್ ನಮ್ಮ ಗ್ರಾಮದಲ್ಲಿರುವ ದೇವಾಲಯಗಳ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು ಎಂದು ಗ್ರಾಮಸ್ಥರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.

ಸದ್ಯ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಅಂತ್ಯ ಸಂಸ್ಕಾರಕ್ಕೆ ಬರುವ ಕುಟುಂಬಸ್ಥರು ಹಾಗೂ ಗಣ್ಯರಿಗಾಗಿ ಪೆಂಡಲ್ ವ್ಯವಸ್ಥೆ ಮಾಡಲಾಗ್ತಿದೆ. ರಾಮನಗರ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಬಂದೋಬಸ್ತ್ ಮಾಡುತ್ತಿದ್ದು, ನೆಲಗುಳಿ ಗ್ರಾಮದಲ್ಲಿ ವಾತಾವರಣ ಮಡುಗಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *