ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದ ಪುಂಡರು ಅರೆಸ್ಟ್

Public TV
1 Min Read

ವಿಜಯಪುರ: ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಯತ್ನಿಸಿದ ಐವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ದೇವರ ಹಿಪ್ಪರಗಿ ಮತ ಕ್ಷೇತ್ರದ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಲಗೋಡ ಎಲ್‍ಟಿ ಗ್ರಾಮದ ಪ್ರಮೋದ ರಾಠೋಡ (ಎ1), ಲಕ್ಷ್ಮಿ ರಾಠೋಡ (ಎ2), ರವಿ ರಾಠೋಡ(ಎ3), ಸಂಜು ರಾಠೋಡ (ಎ4), ರಾಹುಲ್ ರಾಠೋಡ್ (ಎ5) ಮೇಲೆ ಐಪಿಸಿ ಸೆಕ್ಷನ್ 353, 504ಸ ಅನ್ವಯ ಪ್ರಕರಣ ದಾಖಲಾಗಿದೆ.

ಯಲಗೋಡ ಎಲ್‍ಟಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ರೇಖಾ ಸಂತೋಷ ರಾಠೋಡ ಮೇಲೆ ಸೋಮವಾರ ಸಂಜೆ ಹಲ್ಲೆಗೆ ಯತ್ನ ನಡೆದಿತ್ತು. ಈ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದು, ಐವರನ್ನು ಬಂಧಿಸಿ ಸರ್ಕಾರದ ನಿಯಮದಂತೆ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಜಿಲ್ಲೆಯ ಸಿಂದಗಿ ತಾಲೂಕಿನ ಯಲಗೋಡ ತಾಂಡಾದಲ್ಲಿ ಸೋಮವಾರ ಸಂಜೆ ಘಟನೆ ನಡೆದಿತ್ತು. ಮುಂಬೈನಿಂದ ಆಗಮಿಸಿದ್ದ ಪ್ರಮೋದ್ ರಾಠೋಡ್‍ಗೆ ಮನೆಲ್ಲೇ ಇರಬೇಕು, ಜನರೊಂದಿಗೆ ಬರೆಯಬಾರದು ಎಂದು ಆಶಾ ಕಾರ್ಯಕರ್ತೆ ಬುದ್ಧಿ ಮಾತು ಹೇಳಿದ್ದರು. ಇದರಿಂದ ಕೋಪಗೊಂಡು ಆಶಾ ಕಾರ್ಯಕರ್ತೆ ರೇಖಾ ಮೇಲೆ ಪ್ರಮೋದ್ ಹಲ್ಲೆಗೆ ಯತ್ನಿಸಿದ್ದ. ಈತನಿಗೆ ಸಹೋದರರು ಸಹ ಸಾಥ್ ನೀಡಿದ್ದರು. ಘಟನೆ ಕುರಿತು ರೇಖಾ ಗ್ರಾಮ ಪಂಚಾಯತಿ ಹಾಗೂ ಸಿಂದಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *