ನಮ್ಮನ್ನು ಊರಿಗೆ ಕಳುಹಿಸಿಕೊಡಿ- ಪೊಲೀಸರ ಮೇಲೆ ಕಲ್ಲು ತೂರಿದ ವಲಸೆ ಕಾರ್ಮಿಕರು

Public TV
2 Min Read

– ಹಾಟ್‍ಸ್ಪಾಟ್ ಆಗಿದ್ದ ಕಾಸರಗೋಡಿನಲ್ಲಿಲ್ಲ ಒಂದೇ ಒಂದು ಪ್ರಕರಣ

ತಿರುವನಂತಪುರಂ: ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಸುಮಾರು 700 ವಲಸೆ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಅಕ್ಕಲಂ ಬಳಿಯ ಒರುವತಿಲ್ಕೋಟದಲ್ಲಿ ಭಾನುವಾರ ತಡರಾತ್ರಿ ಸುಮಾರು 700 ವಲಸೆ ಕಾರ್ಮಿಕರು ಸೇರಿಕೊಂಡು ನಮ್ಮನ್ನು ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿ ಎಂದು ಪ್ರತಿಭಟಿಸಿದ್ದಾರೆ. ಈ ವೇಳೆ ಅಲ್ಲಿಗೆ ಪೊಲೀಸರು ಬಂದು ಪ್ರತಿಭಟನೆ ನಿಲ್ಲಿಸುವಂತೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಈ ಎಲ್ಲ ಕಾರ್ಮಿಕರು ದೇಶದ ವಿವಿಧೆಡೆಯಿಂದ ಬಂದು ಕೇರಳದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಇವರು ಲಾಕ್‍ಡೌನ್ ಆದ ಮೇಲೆ ಎಲ್ಲ ಕೆಲಸಗಳು ನಿಂತು ಹೋಗಿದೆ. ನಮ್ಮ ಬಳಿ ಊಟ ತಿನ್ನಲು ದುಡ್ಡು ಇಲ್ಲ, ಮಾಡಲು ಕೆಲಸವಿಲ್ಲ ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಒತ್ತಾಯ ಮಾಡಿದ್ದಾರೆ. ಮಾರ್ಚ್ 24ರಂದು ದೇಶ ಲಾಕ್‍ಡೌನ್ ಆದ ಬಳಿಕ ಇವರು ತಿನ್ನಲು ಊಟವಿಲ್ಲದೇ ಪರದಾಡುವ ಸ್ಥಿತಿ ತಲುಪಿದ್ದಾರೆ.

ಈ ಕಾರಣದಿಂದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆ ಪೊಲೀಸರು ಸ್ಥಳಕ್ಕೆ ಜಮಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ನಿಮ್ಮನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ ಬಳಿಕೆ ಕಾರ್ಮಿಕರು ಅಲ್ಲಿಂದ ತೆರೆಳಿದ್ದಾರೆ.

ಕೇರಳದಲ್ಲಿ ಹಿಡಿತಕ್ಕೆ ಬಂದ ಕೊರೊನಾ:
ದೇಶದಲ್ಲಿ ಮೊದಲು ಕೊರೊನಾ ಕಾಣಿಸಿಕೊಂಡಿದ್ದ ಕೇರಳದಲ್ಲಿ ಈಗ ಹಿಡಿತಕ್ಕೆ ಬಂದಿದೆ. ಕೇರಳದಲ್ಲಿ ಕೊರೊನಾ ಹಾಟ್‍ಸ್ಟಾಟ್ ಆಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಈಗ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಈ ನಡುವೆ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಾಜ ಅವರ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದರ ಜೊತೆಗೆ ಕೆಕೆ ಶೈಲಾಜ ಅವರು, ಬೇರೆ ಪ್ರದೇಶದಿಂದ ಕೇರಳಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಕೊರೊನಾದ ಒಂದು ಲಕ್ಷಣ ಕಂಡುಬಂದರೂ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಲಕ್ಷಣ ಕಂಡುಬಾರದೆ ಇದ್ದರೇ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ನಿಯಮ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *