ದೇಶದಲ್ಲಿ ಮತ್ತೆ ಕಠಿಣ ಲಾಕ್‍ಡೌನ್ ಬರುತ್ತಾ?- ರಾಜ್ಯಗಳ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಕೇಂದ್ರ

Public TV
2 Min Read

ನವದೆಹಲಿ: ದೇಶದಲ್ಲಿ ಲಾಕ್‍ಡೌನ್ 3.0 ವಿಸ್ತರಣೆಯಾಗಿ ಏಳು ದಿನಗಳು ಕಳೆದು ಹೋಗಿದೆ. ಇನ್ನೇನು ಏಳು ದಿನಗಳು ಬಾಕಿ ಉಳಿದಿವೆ. ಈ ನಡುವೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಆರೋಗ್ಯ ಇಲಾಖೆ ವೈರಸ್ ಜೊತೆಗೆ ಬದುಕು ನಡೆಸಬೇಕು ಅಂತಿದೆ. ಹೀಗಾಗಿ ಲಾಕ್‍ಡೌನ್ ಬಳಿಕ ಮುಂದೇನು ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ.

ಎರಡನೇ ಹಂತದ ಲಾಕ್‍ಡೌನ್ ವೇಳೆ ಕಂಟ್ರೋಲ್‍ನಲ್ಲಿದ್ದ ಸೋಂಕಿತರ ಪ್ರಮಾಣ ಲಾಕ್‍ಡೌನ್ 3.0 ಆರಂಭವಾಗುತ್ತಿದ್ದಂತೆ ದುಪ್ಪಟ್ಟಾಗಲು ಆರಂಭಿಸಿದೆ. ಕಳೆದೊಂದು ವಾರದಿಂದ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗುತ್ತಿದೆ. ಇದು ಕೇಂದ್ರ ಸರ್ಕಾರದ ನಿದ್ದೆ ಕೆಡಿಸಿದೆ. ಇನ್ನೊಂದು ವಾರದಲ್ಲಿ ಅಂತ್ಯವಾಗಲಿರುವ ಲಾಕ್‍ಡೌನ್ ಬಳಿಕ ಮುಂದೇನು ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ಆರಂಭವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಮುಖ ರಾಜ್ಯಗಳ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಕೇಳಿದೆ.

ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಲಾಕ್‍ಡೌನ್ ನಿಭಾಯಿಸುವ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ. ಸೋಂಕಿನ ಆಧಾರದ ಮೇಲೆ ಆಯಾ ರಾಜ್ಯ ಸರ್ಕಾರಗಳು ಪ್ರದೇಶವಾರು ಲಾಕ್‍ಡೌನ್ ನಿಯಮಗಳನ್ನು ಅನ್ವಯಿಸಲು ಅವಕಾಶ ಕೊಡುವ ಸಂಭವ ಇದೆ ಎನ್ನಲಾಗುತ್ತಿದೆ.

ಕಡಿಮೆ ಸೋಂಕಿರುವ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿಗಳ ಸುಧಾರಣೆ ಭಾಗವಾಗಿ ಲಾಕ್‍ಡೌನ್ ಮತ್ತಷ್ಟು ಸಡಿಲ ಮಾಡುವ ಸಾಧ್ಯತೆ ಇದೆ. ಅಲ್ಪ ಪ್ರಮಾಣದ ಸೋಂಕು ಮತ್ತು ಗ್ರೀನ್‍ಝೋನ್ ಪ್ರದೇಶಗಳಲ್ಲಿ ಸಾರಿಗೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಆರಂಭಿಸಲು ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜ್ಯಗಳಲ್ಲಿನ ಕೊರೊನಾ ಪರಿಸ್ಥಿತಿ ಅವಲೋಕನ ನಡೆಸಲು ಕೇಂದ್ರ ತನ್ನ ಟಾಸ್ಕ್ ಫೋರ್ಸ್ ಸದಸ್ಯರನ್ನು ಕಳುಹಿಸುತ್ತಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ದೆಹಲಿ ಏಮ್ಸ್ ಆಸ್ಪತ್ರೆ ನಿರ್ದೇಶಕ ಟಾಸ್ಕ್ ಫೋರ್ಸ್ ಸದಸ್ಯ ಡಾ. ರಣದೀಪ್ ಗುಲೇರಿಯಾ ಗುಜರಾತ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ. ಅಲ್ಲದೇ ಲಾಕ್‍ಡೌನ್ ಮುಂದುವರಿಸುವ ಬಗ್ಗೆಯೂ ಅಲ್ಲಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಗುಲೇರಿಯಾ ಮಾತ್ರವಲ್ಲದೇ ಇತರೆ ಸದಸ್ಯರು ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ದೆಹಲಿಗೆ ಭೇಟಿ ನೀಡಿ ಅಭಿಪ್ರಾಯ ಪಡೆದುಕೊಳ್ಳಲಿದ್ದಾರೆ.

ಈ ಎಲ್ಲಾ ಅಭಿಪ್ರಾಯಗಳ ಜೊತೆಗೆ ತಜ್ಞರ ಅಭಿಪ್ರಾಯ ಸೇರಿ ಪ್ರಧಾನಿ ನರೇಂದ್ರ ಮೋದಿ ಕೈ ತಲುಪಲಿದೆ. ಇನ್ನೊಂದೆರಡು ದಿನದಲ್ಲಿ ಕೇಂದ್ರ ಸಚಿವರ ಸಮಿತಿ ಸಭೆ ಕೂಡ ನಡೆಯಲಿದ್ದು, ಲಾಕ್‍ಡೌನ್ ಭವಿಷ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಮೋದಿಗೆ ಸಲಹೆ ನೀಡಲಿದ್ದಾರೆ. ಸದ್ಯ ಅಭಿಪ್ರಾಯ ಸಂಗ್ರಹಿಸುತ್ತಿರುವ ಕೇಂದ್ರ 3-4 ದಿನಗಳಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *