ನೆಲಮಂಗಲ: ಲಾಕ್ ಡೌನ್ ಸಡಿಲಿಸಿ ಎಣ್ಣೆ ಅಂಗಡಿಗಳನ್ನು ಓಪನ್ ಮಾಡಿದ್ದೇ ತಡ ಒಂದೊಂದೇ ಘಟನೆಗಳು ಹೊರಬರುತ್ತಿವೆ. ಇದೀಗ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸಿದ್ಧೇಶ್ವರ ಬಡಾವಣೆಯಲ್ಲಿ ನಡೆದಿದೆ. 24 ವರ್ಷದ ದಿವ್ಯ ಕೊಲೆಯಾದ ದುರ್ದೈವಿ. ಪತಿ ತೀರ್ಥಪ್ರಸಾದ್ ಚಾಕುವಿನಿಂದ ಈಕೆಯ ಕತ್ತು ಸೀಳಿ ಕೊಲೆಗೈದಿದ್ದಾನೆ.
ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ತೀರ್ಥಪ್ರಸಾದ್, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೃತ್ಯದ ಬಳಿಕ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.