ಸತ್ತಿಲ್ಲ ಬದುಕಿದ್ದಾನೆ ಸರ್ವಾಧಿಕಾರಿ ಕಿಮ್- ಉಹಾಪೋಹದ ಬಳಿಕ ಕಾಣಿಸಿಕೊಂಡ ಹುಚ್ಚುದೊರೆ

Public TV
2 Min Read

ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಬಹಳ ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ. ಈ ಮೂಲಕ ತನ್ನ ಆರೋಗ್ಯದ ಬಗ್ಗೆ ಇದ್ದ ಉಹಾಪೋಹಗಳಿಗೆ ತೆರೆ ಎಳೆದಿದ್ದಾನೆ.

ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಕಿಮ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆತ ಸಾವನ್ನಪ್ಪಿರಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ ಕಿಮ್ ಇಂದು ತನ್ನ ದೇಶದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಈ ಎಲ್ಲ ಗಾಳಿ ಸುದ್ದಿಗಳಿಗೂ ಬ್ರೇಕ್ ಹಾಕಿದ್ದಾನೆ.

ಕಿಮ್ ತನ್ನ ಸಹೋದರಿ ಮತ್ತು ತನ್ನ ಅಪ್ತ ಅಧಿಕಾರಿಗಳೊಂದಿಗೆ ಇಂದು ಕಾಣಿಸಿಕೊಂಡಿದ್ದು, ತನ್ನ ದೇಶದಲ್ಲಿ ಆರಂಭವಾದ ನೂತನ ರಸಗೊಬ್ಬರ ಕಾರ್ಖಾನೆಯನ್ನು ಟೇಪ್ ಕತ್ತರಿಸುವ ಮೂಲಕ ಓಪನ್ ಮಾಡಿದ್ದಾನೆ. ಜೊತೆಗೆ ಶುಕ್ರವಾರವೇ ಕಿಮ್ ಹೊರಗೆ ಬಂದಿದ್ದು, ತನ್ನ ದೇಶದ ರಾಜಧಾನಿ ಪ್ಯೊಂಗ್ಯಾಂಗ್ ಬಳಿಯ ಸುನ್‍ಚಾನ್‍ನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂದು ತಿಳಿದು ಬಂದಿದೆ.

ಇದೇ ವೇಳೆ ರಸಗೊಬ್ಬರ ಕಾರ್ಖಾನೆ ಓಪನ್ ಮಾಡಿ ಮಾತನಾಡಿದ ಕಿಮ್ ಜಾಂಗ್-ಉನ್, ಆಧುನಿಕ ರಸಗೊಬ್ಬರ ಕಾರ್ಖಾನೆಯನ್ನು ನಿರ್ಮಿಸುವುದು ನಮ್ಮೆಲ್ಲರ ಕನಸಾಗಿತ್ತು. ಈ ಸುದ್ದಿ ಕೇಳಿದರೆ ನಮ್ಮ ಅಜ್ಜ ಕಿಮ್ ಇಲ್ ಸುಂಗ್ ಮತ್ತು ಅಪ್ಪ ಕಿಮ್ ಜಾಂಗ್ ಇಲ್ ಬಹಳ ಸಂತೋಷ ಪಡುತ್ತಿದ್ದರು ಎಂದು ಹೇಳಿದನು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಕಾರ್ಯಕ್ರಮದ ನಂತರ ತಕ್ಷಣ ಆತನ ಫೋಟೋಗಳು ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಈ ವಿಚಾರವಾಗಿ ವಾರದ ಹಿಂದೆ ಮಾತನಾಡಿದ್ದ ಉತ್ತರ ಕೊರಿಯಾದ ಭದ್ರತಾ ಸಲಹೆಗಾರ ಮೂನ್ ಜೇ-ಇನ್, ಕಿಮ್ ಜಾಂಗ್-ಉನ್ ಜೀವಂತವಾಗಿ ಇದ್ದಾರೆ. ಚೆನ್ನಾಗಿ ಇದ್ದಾರೆ. ಅವರು ಏಪ್ರಿಲ್ 13ರಿಂದ ಉತ್ತರ ಕೊರಿಯಾದ ಪೂರ್ವದಲ್ಲಿರುವ ರೆಸಾರ್ಟ್ ಪಟ್ಟಣವಾದ ವೊನ್ಸಾನ್‍ನಲ್ಲಿ ತಂಗಿದ್ದರು ಎಂದು ಹೇಳಿದ್ದರು. ಆದರೆ ಈ ಮಾಹಿತಿಯನ್ನು ಒಪ್ಪದ ರಾಷ್ಟ್ರೀಯ ಮಾಧ್ಯಮಗಳು ಕಿಮ್ ಆರೋಗ್ಯ ಸರಿಯಿಲ್ಲ. ಆತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ವರದಿ ಮಾಡಿದ್ದವು.

ಕಿಮ್ ಆರೋಗ್ಯದ ಬಗ್ಗೆ ಅನುಮಾನ ಬರಲು ಕಾರಣವೇನು?
ಕಿಮ್ ಜಾಂಗ್-ಉನ್ ಸರ್ವಾಧಿಕಾರಿಯಾಗಿದ್ದು, ಹೆಚ್ಚು ಹೆಚ್ಚು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದನು. ಆದರೆ ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವರದಿಗಳ ಪ್ರಕಾರ ಕಿಮ್ ಏಪ್ರಿಲ್ 15 ರಂದು ನಡೆದ ತನ್ನ ಅಜ್ಜ ಮತ್ತು ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಹುಟ್ಟುಹಬ್ಬದ ಆಚರಣೆಗೂ ಗೈರು ಹಾಜರಾಗಿದ್ದನು. ಅಧಿಕಾರಕ್ಕೆ ಏರಿದ ಬಳಿಕ ಇಲ್ಲಿಯವರೆಗೆ ಈ ಕಾರ್ಯಕ್ರಮಕ್ಕೆ ಗೈರಾಗಿರಲಿಲ್ಲ. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿತ್ತು.

ಕಿಮ್ ಜಾಂಗ್-ಉನ್ ಚೈನ್ ಸ್ಮೋಕರ್ ಆಗಿದ್ದು, ಆತನ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ಆತನ ಆರೋಗ್ಯ ಹದಗೆಟ್ಟಿದ್ದು ಆತ ಸಾವನ್ನಪ್ಪಿರಬಹುದು ಎಂದು ಹೇಳಲಾಗಿತ್ತು. ಈ ನಡುವೆ ಚೀನಾದಿಂದ ಉನ್ನತ ವೈದ್ಯರ ತಂಡ ಉತ್ತರ ಕೊರಿಯಾಗೆ ಹೋಗಿದ್ದು, ಆತನಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *