ಕೆ.ಟಿ ಶ್ರೀಕಂಠೇಗೌಡ್ರು ಮತ್ತೊಬ್ಬರಿಗೆ ರೋಲ್ ಮಾಡೆಲ್ ಆಗಬೇಕಿತ್ತು: ಶ್ರೀರಾಮುಲು

Public TV
1 Min Read

ಬಳ್ಳಾರಿ: ಮಂಡ್ಯ ಜಿಲ್ಲೆಯ ಜೆಡಿಎಸ್ ವಿಧಾನ ಪರಿಷತ್‍ನ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಮತ್ತೊಬ್ಬರಿಗೆ ರೋಲ್ ಮಾಡೆಲ್ ಆಗಬೇಕಿತ್ತು. ಅದು ಬಿಟ್ಟು ತಮ್ಮ ದುಂಡಾವರ್ತನೆಯನ್ನು ತೋರಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪತ್ರಕರ್ತರಿಗೆ ಈ ಕೊರೊನಾ ತಪಾಸಣೆಯನ್ನು ಆಯೋಜಿಸಲಾಗಿತ್ತು. ಆದರೆ ಎಂಎಲ್‍ಸಿ ಶ್ರೀಕಂಠೇಗೌಡರು ತಮ್ಮ ಪುತ್ರ ಕೃಷಿಕ್ ಗೌಡನನ್ನು ಎತ್ತಿಕಟ್ಟಿ ತಮ್ಮ ದುಂಡಾವರ್ತನೆಯನ್ನು ಪ್ರದರ್ಶಿಸಿದ್ದಾರೆ. ಶ್ರೀಕಂಠೇಗೌಡರು ಹಿರಿಯರು ಜೊತೆಗೆ ಅನುಭವಿ ರಾಜಕಾರಣಿ. ಈ ರೀತಿ ಬೀದಿಗಿಳಿದು ಜಗಳ ಮಾಡ ಬಾರದಿತ್ತು. ಈ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದರು.

ಇನ್ಮುಂದೆ ಯಾವುದೇ ರೀತಿಯ ದುರ್ಘಟನೆ ಆಗಬಾರದೆಂದು ಮನವಿ ಮಾಡುತ್ತೇನೆ. ಅವರ ವಿರುದ್ಧ ಕಾನೂನು ಕ್ರಮ ಆಗುತ್ತದೆ. ಪಾದರಾಯನಪುರ ಸೇರಿದಂತೆ ನಾನಾ ಕಡೆ ಈ ರೀತಿಯ ಘಟನೆ ನಡೆದಿದೆ. ಇದು ರಿಪೀಟ್ ಆಗಬಾರದು. ಪತ್ರಕರ್ತರ ಮೇಲೆ ನಾನಾ ಕಡೆ ಹಲ್ಲೆಯಾಗುತ್ತಿವೆ. ಪತ್ರಕರ್ತರು ಈ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರ ಮತ್ತು ಅವರ ಕುಟುಂಬದ ರಕ್ಷಣೆ ನಮ್ಮ ಸರ್ಕಾರದ ಹೊಣೆ. ಹಾಗಾಗಿ ಪತ್ರಕರ್ತರಿಗೆ ಕೋವಿಡ್-19 ಚೆಕಪ್ ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು.

ಕೊರೊನಾ ವೈರಸ್‍ನ ಶಂಕಿತರು ಬಳ್ಳಾರಿ ಸೇರಿದಂತೆ ನಾನಾ ಕಡೆ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ಲಾಸ್ಮಾ ಥೆರಪಿ ನಾಳೆಯಿಂದ ಅಧಿಕೃತವಾಗಿ ಆರಂಭವಾಗಲಿದೆ. ಪ್ಲಾಸ್ಮಾ ಥೆರಪಿಗೆ ರಕ್ತದಾನ ಮಾಡಲು ಗುಣಮುಖರಾದವರು ಮುಂದೆ ಬರಬೇಕು. ರಾಜ್ಯದ ನಂಜನಗೂಡು, ಮೈಸೂರಿನಲ್ಲಿ ಹೆಚ್ಚು ಪ್ರಕರಣ ಬಂದಿವೆ. ಜ್ಯೂಬಿಲಿಯೆಂಟ್ ಕಾರ್ಖಾನೆ ಪಾಸಿಟಿವ್ ಮೂಲ ಯಾವುದೆಂದು ಇದುವರೆಗೆ ಗೊತ್ತಾಗಿಲ್ಲ. ಹೀಗಾಗಿ ಈ ಬಗ್ಗೆ ನಾಳೆ ನಡೆಯಲಿರುವ ಪ್ರಧಾನಿ ಮೋದಿಯವರ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಗಮನಕ್ಕೆ ತರುವುದಾಗಿ ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯನವರು ಸಿಎಂ ಯಡಿಯೂರಪ್ಪಗೆ ಪತ್ರ ಬರೆದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುವವರಿಗೆ ಸಮಸ್ಯೆಯಾಗಿದೆ ಎಂದಿದ್ದರು. ನನ್ನ ಗಮನಕ್ಕೆ ಬಂದ ನಂತರ ನಾನು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾತನಾಡಿದ್ದೇನೆ. ಡೆಂಗ್ಯೂ ಜ್ವರ, ಹೃದಯ ಸಂಬಂಧಿ ಕಾಯಿಲೆಯ ಸಮಸ್ಯೆ ಇರುವವರಿಗೆ ಪಾಸ್ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *