ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ 5 ಕೋಟಿ ನೀಡಿದ ಸುಂದರ್ ಪಿಚೈ

Public TV
1 Min Read

ನವದೆಹಲಿ: ಕೊರೊನಾ ವಿರುದ್ಧದ ಹೋರಾಟಕ್ಕೆ ಗೂಗಲ್ ಕಂಪನಿಯ ಸಿಇಒ ಸುಂದರ್ ಪಿಚೈ ಅವರು 5 ಕೋಟಿ ದೇಣಿಗೆ ನೀಡಿದ್ದಾರೆ.

ಕೊರೊನಾ ಮಹಾಮಾರಿ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಭಾರತದಲ್ಲೂ ದಿನೇ ದಿನೇ ಸೋಂಕು ಹೆಚ್ಚಾಗುತ್ತಿದೆ. ಇದರ ವಿರುದ್ಧ ಹೋರಾಡಲು ಸರ್ಕಾರಗಳು ಬಹಳ ಕಷ್ಟಪಡುತ್ತಿವೆ. ಈ ಹೋರಾಟದಲ್ಲಿ ಸರ್ಕಾರದ ಕೈಯನ್ನು ಬಲಪಡಿಸಲು ಕೆಲ ಉದ್ಯಮಿಗಳು ಸರ್ಕಾರಕ್ಕೆ ದೇಣಿಗೆ ರೂಪದಲ್ಲಿ ಸಹಾಯ ಮಾಡುತ್ತಿದ್ದಾರೆ. ಅಂತಯೇ ಸುಂದರ್ ಪಿಚೈ ಅವರು ಕೂಡ ಸರ್ಕಾರೇತರ ಸಂಸ್ಥೆಯಾದ ಗಿವ್‍ಇಂಡಿಯಾ ಐದು ಕೋಟಿ ದೇಣಿಗೆ ನೀಡಿದ್ದಾರೆ.

ಗಿವ್‍ಇಂಡಿಯಾ ಎಂಬುದು ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಇದು ಆನ್‍ಲೈನ್ ಮೂಲಕ ದೇಣಿಗೆ ಸಂಗ್ರಹಿಸುತ್ತದೆ. ಈ ದೇಣಿಗೆಯನ್ನು ಉತ್ತಮ ರೀತಿಯಲ್ಲಿ ಉಪಯೋಗ ಮಾಡುವ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಪಿಚೈ ಅವರ ವಿಚಾರವಾಗಿ ಟ್ವೀಟ್ ಮಾಡಿರುವ ಗಿವ್‍ಇಂಡಿಯಾ ಸಂಸ್ಥೆ, ದೇಣಿಗೆ ನೀಡಿದ್ದಕ್ಕೆ ಧನ್ಯವಾದಗಳು ಸುಂದರ್ ಪಿಚೈ, ನೀವು ನೀಡಿದ 5 ಕೋಟಿ ಹಣ ಕೂಲಿ ಕಾರ್ಮಿಕರ ಕುಟುಂಬಕ್ಕೆ ಉಪಯೋಗವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಗೂಗಲ್ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವಿಶ್ವದದ್ಯಾಂತ 800 ಮಿಲಿಯನ್ ನೀಡುವುದಾಗಿ ಘೋಷಿಸಿಕೊಂಡಿತ್ತು. ಇದರಲ್ಲಿ ಸಣ್ಣ ಉದ್ಯಮಿಗಳಿಗೆ ಸಹಾಯವಾಗಲಿ ಎಂದು ಎನ್‍ಜಿಒ ಮತ್ತು ಬ್ಯಾಂಕ್‍ಗಳಿಗೆ 200 ಮಿಲಿಯನ್ ಹೂಡಿಕೆ ನಿಧಿಯನ್ನು ನೀಡುವುದಾಗಿ ಗೂಗಲ್ ಹೇಳಿತ್ತು. ಇದರ ಜೊತೆಗೆ ಸುಂದರ್ ಪಿಚೈ ಅವರು ಪ್ರತ್ಯೇಕವಾಗಿ 5 ಕೋಟಿ ನೀಡಿದ್ದಾರೆ.

ಕಾರ್ಪೊರೇಟ್ ಸಂಸ್ಥೆಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರದ ಜೊತೆ ಕೈಜೋಡಿಸಿವೆ. ಟಾಟಾ ಟ್ರಸ್ಟ್ ಮತ್ತು ಟಾಟಾ ಗ್ರೂಪ್ಸ್ ಜೊತೆಗೂಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ 1,500 ಕೋಟಿ ದೇಣಿಗೆ ನೀಡಿದೆ. ಇದರ ಜೊತೆಗೆ ವಿಪ್ರೋ ಕಂಪನಿ ಕೂಡ ಭಾರತ ಸರ್ಕಾರಕ್ಕೆ 1,125 ಕೋಟಿ ನೀಡಿದೆ. ಹೀಗೆ ಎಲ್ಲಾ ಭಾರತದ ಕಂಪನಿಗಳು ತಮಗಾದಷ್ಟು ಸಹಾಯ ಮಾಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ನಿಂತಿವೆ.

Share This Article
Leave a Comment

Leave a Reply

Your email address will not be published. Required fields are marked *