ಮಳೆ, ಗಾಳಿಯ ರಭಸಕ್ಕೆ 25 ಜನರಿದ್ದ ಬಸ್ ಮೇಲೆ ಬಿತ್ತು ಕಬ್ಬಿಣದ ಕಂಬಿಗಳು

Public TV
2 Min Read

– ಬೆಂಗ್ಳೂರು ಸೇರಿ ರಾಜ್ಯದ ವಿವಿಧೆಡೆ ಅಕಾಲಿಕ ಮಳೆ
– ಕೊರೊನಾ ಆತಂಕ ಹೆಚ್ಚಿಸಿದ ವರುಣ

ಬೆಂಗಳೂರು: ಮಳೆ ಗಾಳಿಯ ರಭಸಕ್ಕೆ ಬಸ್ ಮೇಲೆ ಕಬ್ಬಿಣದ ಕಂಬಿಗಳು ವಾಲಿ ಬಿದ್ದ ಘಟನೆ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿ ನಡೆದಿದೆ.

ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿದ್ದರಿಂದ ಮೆಟ್ರೋ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಆದರೆ ಇಂದು ಜೋರಾಗಿ ಬಂದ ಗಾಳಿ ಮಳೆಯಿಂದ ಮೆಟ್ರೋ ಪಿಲ್ಲರ್‌ಗೆ ಅಳವಡಿಸಲು ನಿಲ್ಲಿಸಲಾಗಿದ್ದ ಕಬ್ಬಿಣದ ಕಂಬಿಗಳು ಹಾರೋಹಳ್ಳಿಯಿಂದ ಬೆಂಗಳೂರಿನತ್ತ ಬರುತ್ತಿದ್ದ ಖಾಸಗಿ ಕಂಪನಿಯ ಬಸ್ ಮೇಲೆ ಬಿದ್ದಿವೆ.

ಅದೃಷ್ಟವಶಾತ್ ಬಸ್ ಮುಂಭಾಗದಲ್ಲಿ ಕಂಬಿಗಳು ಬಿದ್ದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಬಸ್‍ನಲ್ಲಿದ್ದ 25 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಹುಳಿಮಾವು ಪೊಲೀಸರು ಸ್ಥಳಕ್ಕಾಗಮಿಸಿ ರಸ್ತೆ ತೆರವುಗೊಳಿಸಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರು, ರಾಮನಗರ, ರಾಯಚೂರು ಸೇರದಂತೆ ರಾಜ್ಯದ ವಿವಿಧೆಡೆ ವರುಣ ಗುರುವಾರ ಅಬ್ಬರಿಸಿದ್ದಾನೆ. ಮಳೆಯಿಂದಾಗಿ ಕೊರೊನಾ ಸೋಂಕು ಬಹುಬೇಗ ಹೆಚ್ಚಿನ ಜನರಿಗೆ ಹರಡುವ ಆತಂಕ ಶುರುವಾಗಿದೆ.

ಬೆಂಗಳೂರಿನ ತಿಲಕ ನಗರ, ರಾಜಾಜಿನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ಮೆಜೆಸ್ಟಿಕ್ ಸೇರಿದಂತೆ ಅನೇಕ ಕಡೆ ವರುಣ ಅಬ್ಬರಿಸಿದ್ದಾನೆ. ಮಳೆ, ಗಾಳಿಯ ರಭಸಕ್ಕೆ ಕೆಲವು ಕಡೆ ಮರದ ರೆಂಬೆಗಳು ಮುರಿದು ಬಿದ್ದಿವೆ. ಮೆಜೆಸ್ಟಿಕ್ ಸಮೀಪದ ಪೊತೀಸ್ ಬಳಿ ಮರದ ಕೊಂಬೆಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಬೆಂಗಳೂರು ಹೊರವಲಯ ಆನೇಕಲ್, ಅತ್ತಿಬೆಲೆ, ಚಂದಾಪುರ, ಹೆಬ್ಬಾಗೋಡಿ, ಸರ್ಜಾಪುರ ಭಾರೀ ಮಳೆಯಾಗಿದೆ.

ರಾಮನಗರ:
ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸಂಜೆಯಾದ್ರೆ ಸಾಕು ಮಳೆರಾಯ ಅಬ್ಬರಿಸುತ್ತಿದ್ದಾನೆ. ಗುಡುಗು ಸಿಡಿಲು ಹಾಗೂ ಜೋರು ಗಾಳಿ ಸಹಿತ ಅಕಾಲಿಕ ಮಳೆ ಜಿಲ್ಲೆಯಾದ್ಯಂತ ಜೋರಾಗಿದೆ. ಇಂದು ಕೂಡ ರಾಮನಗರ ಜಿಲ್ಲೆಯ ಹಲವೆಡೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆರಾಯ ಆರ್ಭಟಿಸಿದ್ದು, ಗುಡುಗು ಸಿಡಿಲು ಸಹಿತ ಜೋರು ಗಾಳಿ ಮಳೆಯಾಗಿದೆ. ಕೊರೊನಾ ಆತಂಕದ ನಡುವೆ ರಸ್ತೆಗಿಳಿದು ಅನಾವಶ್ಯಕವಾಗಿ ಸಂಚಾರ ಮಾಡುತ್ತಿದ್ದವರು ಮಳೆರಾಯನ ಆರ್ಭಟಕ್ಕೆ ತತ್ತರಿಸುವಂತಾಗಿತ್ತು.

ಹೆದ್ದಾರಿ ಅಕ್ಕಪಕ್ಕದಲ್ಲಿ ನಿಲ್ಲಲು ಸ್ಥಳಾವಕಾಶ ಸಿಗದೇ ಒಬ್ಬಂಟಿ ಹಾಗೂ ಇಬ್ಬರು ಇದ್ದ ಬೈಕ್ ಸವಾರರು ಮಳೆಯಲ್ಲಿ ನೆನೆಯುತ್ತಲೇ ಸಾಗುತ್ತ ಇದ್ದುದ್ದು ಕಂಡುಬಂದಿದೆ. ಬೇಸಿಗೆಯ ಬಿರು ಬಿಸಿಲ ಝಳಕ್ಕೆ ಬೆಂಡಾಗಿದ್ದ ಜಿಲ್ಲೆಯ ಜನರು ಇದೀಗ ಅಕಾಲಿಕ ಮಳೆಯಿಂದ ಭಯ ಭೀತರಾಗಿದ್ದಾರೆ. ಸುತ್ತಲಿನ ಜಿಲ್ಲೆಗಳಾದ ಬೆಂಗಳೂರು, ಮಂಡ್ಯ, ಮೈಸೂರು, ತುಮಕೂರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಮಳೆಯಿಂದ ವಾತಾವರಣ ತಂಪಾಗುತ್ತಿರುವುದು ಚಳಿಯ ಜೊತೆಗೆ ಕೊರೊನಾ ಭಯ ನಡುಕವನ್ನುಂಟು ಮಾಡಿದೆ.

ರಾಯಚೂರು:
ನಗರ ಸೇರಿ ಜಿಲ್ಲೆಯ ಹಲವೆಡೆಗಳಲ್ಲಿ ಬಿರುಗಾಳಿ ಸಹಿತ ಜೋರು ಮಳೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮಳೆಯಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಇಂದು ಸುರಿದ ಮಳೆ, ಗಾಳಿಯಿಂದಾಗಿ ಭತ್ತ ಹಾಗೂ ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *