ಲಂಡನ್‍ನಲ್ಲಿ ಬಸವಣ್ಣನ ಪ್ರತಿಮೆ ನಿರ್ಮಿಸಿದ ಕನ್ನಡಿಗ ನೀರಜ್ ಪಾಟೀಲ್‍ಗೆ ಕೊರೊನಾ

Public TV
2 Min Read

– ರೋಗಿಗೆ ಚಿಕಿತ್ಸೆ ನೀಡುವಾಗ ತಗುಲಿದ ಸೋಂಕು
– ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಎಚ್‍ಡಿಡಿ

ಲಂಡನ್/ ಬೆಂಗಳೂರು: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್‍ಗೆ ಘಟಾನುಘಟಿ ದೇಶವೇ ತತ್ತರಿಸಿ ಹೋಗಿವೆ. ಹೀಗಿರುವಾಗ ಇಂಗ್ಲೆಂಡ್‍ನ ಥೇಮ್ಸ್ ನದಿಯ ದಡದಲ್ಲಿ ಜಗಜ್ಯೋತಿ ಬಸವಣ್ಣ ಅವರ ಪ್ರತಿಮೆ ಸ್ಥಾಪಿಸಿದ ಕನ್ನಡಿಗ ಲ್ಯಾಂಬೆತ್ ನಗರ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರಿಗೂ ಕೊರೊನಾ ಸೋಂಕು ತಗುಲಿದೆ.

ನೀರಜ್ ಪಾಟೀಲ್ ಅವರಿಗೆ ಸೋಂಕು ತಗುಲಿರುವುದನ್ನು ತಿಳಿದು ಸಿಎಂ ಯಡಿಯೂರಪ್ಪ ಕೂಡ ಶಾಕ್ ಆಗಿದ್ದಾರೆ. ಯಾಕೆಂದರೆ ಮಾರ್ಚ್ ಮೊದಲ ವಾರದಲ್ಲಿ ವಿಧಾನಸೌಧದಲ್ಲಿ ನೀರಜ್ ಪಾಟೀಲ್ ಅಧಿವೇಶನ ಸಂದರ್ಭದಲ್ಲಿ ಓಡಾಡಿದ್ದರು. ಫೆಬ್ರವರಿ 29ರಂದು ಸಿಎಂ ಬಿಎಸ್‍ವೈರನ್ನು ಭೇಟಿ ಕೂಡ ಮಾಡಿದ್ದರು. ಇತ್ತ ಎಚ್‍ಡಿಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ನೀರಜ್ ಪಾಟೀಲ್ ಅವರು ಬೇಗ ಗುಣವಾಗಲಿ ಎಂದು ಪ್ರಾರ್ಥಿಸೋಣ ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಇಂಗ್ಲೆಂಡ್ ದೇಶದ ಲಂಡನ್‍ನ ಥೇಮ್ಸ್ ನದಿಯ ದಡದಲ್ಲಿ ಜಗಜ್ಯೋತಿ ಬಸವಣ್ಣನವರ ಪ್ರತಿಮೆ ನಿರ್ಮಿಸಿದ್ದ ಹೆಮ್ಮೆಯ ಕನ್ನಡಿಗರು, ಆತ್ಮೀಯರು, ಲ್ಯಾಂಬೆತ್ ನಗರದ ಮಾಜಿ ಮಹಾಪೌರರಾದ ಡಾ. ನೀರಜ್ ಪಾಟೀಲ್ ರವರಿಗೆ ಕೊರೊನಾ ಸೋಂಕು ತಗುಲಿರುವುದು ದುರದೃಷ್ಟಕರ. ಸ್ವತಃ ವೈದ್ಯರೂ ಆಗಿರುವ ಅವರು ಈ ಸಂಕಷ್ಟದಿಂದ ಶೀಘ್ರ ಪಾರಾಗಲೆಂದು ಸಮಸ್ತ ಭಾರತೀಯರೂ ಪ್ರಾರ್ಥಿಸೋಣ ಎಂದು ನೀರಜ್ ಅವರ ಜೊತೆ ತಾವು ಇರುವ ಫೋಟೋಗಳನ್ನು ಎಚ್‍ಡಿಡಿ ಶೇರ್ ಮಾಡಿದ್ದಾರೆ.

ಸ್ವತಃ ವೈದ್ಯರಾಗಿರುವ ನೀರಜ್ ಪಾಟೀಲ್ ಅವರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಸ್ವತಃ ನೀರಜ್ ಅವರೇ ಪ್ರತಿಕ್ರಿಯಿಸಿದ್ದಾರೆ. ನಾನು ತೀವ್ರ ಚಳಿ ಜ್ವರ ಹಾಗೂ ಚೆಸ್ಟ್ ಇನ್‍ಫೆಕ್ಷನ್‍ನಿಂದ ಬಳಲುತ್ತಿದ್ದೇನೆ. ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸೆಲ್ಫ್ ಇಸೋಲೇಷನ್‍ನಲ್ಲಿ ಇದ್ದೇನೆ. ಎಲ್ಲರಿಂದ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೆ ಈ ಸೋಂಕು ತಗುಲುತ್ತದೆ ಎಂದು ಕನಸಲ್ಲೂ ನಾನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಬಹುಶಃ ನಾನು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ವಿಫಲನಾಗಿದ್ದೇನೆ ಎನಿಸುತ್ತದೆ. ನಾನು ಸದಾ ಜಿಮ್ ಮಾಡುತ್ತಿದ್ದೆ, ಡಯಟ್ ಮಾಡುತ್ತಿದ್ದೆ. ಹೀಗಾಗಿ ನನ್ನಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದೆ. ನಾನು ಆದಷ್ಟು ಬೇಗ ಗುಣಮುಖನಾಗಿ ಮತ್ತೆ ಕರ್ತವ್ಯಕ್ಕೆ ವಾಪಸ್ಸಾಗುತ್ತೇನೆ ಎಂದು ನೀರಜ್ ಹೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *