ಸರ್ವರ್ ಡೌನ್, ಒಟಿಪಿ ಬರುತ್ತಿಲ್ಲ – ಉಡುಪಿಯಲ್ಲಿ ಪಡಿತರ ಗೊಂದಲ

Public TV
1 Min Read

ಉಡುಪಿ: ಕರ್ನಾಟಕದಲ್ಲಿ ಕೊರೊನಾ ಹಬ್ಬುತ್ತಿರುವ ರೀತಿ ಕಂಡು ರಾಜ್ಯದ ಜನರು ಆತಂಕಕ್ಕೀಡಾಗಿದ್ದಾರೆ. ಲಾಕ್‍ಡೌನ್ ಮತ್ತೆ ಮುಂದುವರೆಯಬಹುದು ಎಂದು ಅಂದುಕೊಂಡು ಪಡಿತರ ಅಂಗಡಿಗಳಿಗೆ ಜನ ಮುಗಿಬಿದ್ದಿದ್ದಾರೆ.

ಉಡುಪಿ ಜಿಲ್ಲೆಯ 298 ಪಡಿತರ ಅಂಗಡಿಗಳಿಗೆ ಅಕ್ಕಿ ಮಾತ್ರ ಈವರೆಗೆ ಪೂರೈಕೆಯಾಗಿದೆ. ಗೋಧಿ, ಸಕ್ಕರೆ, ಎಣ್ಣೆ, ಬೇಳೆ ಕಾಳು ಯಾವುದು ಪೂರೈಕೆಯಾಗಿಲ್ಲ. ಬಿಪಿಎಲ್ ಕಾರ್ಡುದಾರರಿಗೆ ತಲಾ 14 ಕೆಜಿ ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಉಡುಪಿಯಲ್ಲಿ ಒಬ್ಬೊಬ್ಬರಿಗೆ 10 ಕೆಜಿ ಅಕ್ಕಿ ಮಾತ್ರ ಪೂರೈಕೆಯಾಗುತ್ತಿದೆ. ಒಟಿಪಿ, ಹೆಬ್ಬೆಟ್ಟಿನ ಗುರುತು ಇಲ್ಲದೆ ಪಡಿತರ ವಿತರಿಸಬೇಕೆಂದು ಸರ್ಕಾರ ಆದೇಶ ಮಾಡಿದೆ. ಕಳೆದೆರಡು ದಿನಗಳಿಂದ ಸರ್ವರ್ ಡೌನ್ ಆದ ಹಿನ್ನೆಲೆ ನಿಗದಿತ ಪ್ರಮಾಣದಲ್ಲಿ ಅಕ್ಕಿ ವಿತರಣೆ ಆಗುತ್ತಿಲ್ಲ. ಹೀಗಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ಗ್ರಾಮೀಣ ಪ್ರದೇಶದಲ್ಲಿ ಜನ ಜಾತ್ರೆಯೇ ಆಗಿದೆ.

ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂದೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂದಿತ್ತು. ಸರ್ವರ್ ಡೌನ್ ಆಗಿರುವುದರಿಂದ ಜನ ಬಿಸಿಲಿನಲ್ಲಿ ಬೇಯಬೇಕಾಯಿತು. ದಿನಕ್ಕೆ 50 ಜನರಿಗೆ ಮಾತ್ರ ಪಡಿತರ ವಿತರಣೆ ಮಾಡುವ ಸುದ್ದಿ ಹರಿದಾಡುತ್ತಿರುವುದರಿಂದ ಜನ ಗೊಂದಲಕ್ಕೀಡಾಗಿ ಒಂದೇ ದಿನ ನ್ಯಾಯಬೆಲೆ ಅಂಗಡಿಯತ್ತ ಮುಖ ಮಾಡಿದ್ದರು.

ಪಡಿತರ ಪಡೆದುಕೊಳ್ಳಲು ಬಂದ ಜನರು ಮಾತನಾಡಿ, ಎಲ್ಲಾ ದಿನಸಿ ಸಿಗುತ್ತಿಲ್ಲ. ಅಕ್ಕಿಗಾಗಿ ಮಧ್ಯಾಹ್ನದವರೆಗೆ ಕಾಯುವ ಸ್ಥಿತಿಯಿದೆ. ಅಧಿಕಾರಿಗಳು ಒಂದೊಂದು ಏರಿಯಾಕ್ಕೆ ಒಂದು ದಿನ ಅಂತ ನಿಗದಿಪಡಿಸಿದರೆ ಬಿಸಿಲಲ್ಲಿ ಕಾಯುವುದು ತಪ್ಪುತ್ತದೆ ಎಂದರು. ಅಲ್ಲದೇ ಸಾಮಾಜಿಕ ಹೋರಾಟಗಾರರು ನ್ಯಾಯಬೆಲೆ ಅಂಗಡಿ ಮಾಲೀಕರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡಾ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *