ಬಹುಮತ ಸಾಬೀತಿಗೂ ಮುನ್ನವೇ ಕಮಲ್‍ನಾಥ್ ರಾಜೀನಾಮೆ

Public TV
2 Min Read

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‍ ನಾಥ್ ಅವರು ಇಂದು ರಾಜ್ಯಪಾಲ ಲಾಲ್‍ಜಿ ಟಂಡನ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಕಮಲ ಪಡೆದ ಸರ್ಕಾರ ನಡೆಸಲು ಮುಂದಾಗಿದೆ.

ಸುಪ್ರೀಂ ಕೋರ್ಟ್ ಗುರುವಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ಕಮಲ್ ನಾಥ್ ಸರ್ಕಾರ ಇಂದು ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆ ನಡೆಸಬೇಕಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಗೆ ಕಲಾಪಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು. ಈ ಮಧ್ಯೆ ಬಹುಮತ ಪರೀಕ್ಷೆಗೂ ಮುನ್ನವೇ ಕಮಲ್ ನಾಥ್ ಅವರು ರಾಜೀನಾಮೆ ನೀಡಿದ್ದಾರೆ.

ಇದಕ್ಕೂ ಮುನ್ನ ಭೋಪಾಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಧ್ಯಪ್ರದೇಶದ ವಿಧಾನಸಭೆಯ ಫಲಿತಾಂಶವು 11 ಡಿಸೆಂಬರ್ 2018 ರಂದು ಬಂದಿತ್ತು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವಾಗಲೂ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದ್ದೇನೆ. ರಾಜ್ಯದಲ್ಲಿ ಬಿಜೆಪಿಗೆ 15 ವರ್ಷಗಳ ಕಾಲ ಅಧಿಕಾರ ಸಿಕ್ಕಿತ್ತು. ಈಗ ನಾನು 15 ತಿಂಗಳು ಮಾತ್ರವೇ ಅಧಿಕಾರ ನಡೆಸಿದ್ದೇನೆ. ಈ ಮಧ್ಯೆ ಲೋಕಸಭಾ ಚುನಾವಣೆ ಮತ್ತು ನೀತಿ ಸಂಹಿತೆಗೆ ಎರಡೂವರೆ ತಿಂಗಳು ಹೋಯಿತು. ಬಿಜೆಪಿ ನಾಯಕರು ಅಸಹ್ಯವಾಗಿ ನನ್ನ ವಿರುದ್ಧ ಸಂಚು ಹೂಡುತ್ತಿದ್ದರು. ಒಂದು ತಿಂಗಳಲ್ಲಿ ನಮ್ಮ ಸರ್ಕಾರ ರಚನೆಯಾದಾಗ, ಪ್ರತಿ 15 ದಿನಗಳಿಗೊಮ್ಮೆ ಬಿಜೆಪಿ ನಾಯಕರು ಈ ಸರ್ಕಾರ ಹದಿನೈದು ದಿನಗಳ, ಇಲ್ಲವೇ ತಿಂಗಳ ಸರ್ಕಾರ ಎಂದು ಹೇಳುತ್ತಿದ್ದರು ಎಂಬುದು ನಿಮಗೆಲ್ಲರಿಗೂ ತಿಳಿದಿದೆ ಎಂದು ಹೇಳಿದ್ದರು.

ಇಂದು ನಮ್ಮ 22 ಶಾಸಕರಿಗೆ ಆಮಿಷವೊಡ್ಡಲಾಗಿದೆ, ಅವರನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ. ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಬಿಜೆಪಿ ಕುದುರೆ ವ್ಯಾಪಾರ ನಡೆಸಿದೆ. ಇಂದು ಇಡೀ ರಾಜ್ಯ ಇದಕ್ಕೆ ಸಾಕ್ಷಿಯಾಗಿದೆ. ಬಿಜೆಪಿಯು ನಮ್ಮ 22 ಶಾಸಕರ ಬೆಂಬಲದೊಂದಿಗೆ ಸೇರಿ ಪ್ರಜಾಪ್ರಭುತ್ವವನ್ನು ಕೊಂದು ಹಾಕಿದೆ. ರಾಜ್ಯದ ಜನರನ್ನು ಮೋಸ ಮಾಡುವ ಈ ದುರಾಸೆ ಮತ್ತು ಬಂಡುಕೋರರನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಗುಡುಗಿದ್ದರು.

ವಿಧಾನಸಭೆಯಲ್ಲಿ 15 ತಿಂಗಳ ಹಿಂದೆಯೇ ನಾವು ಬಹುಮತ ಸಾಬೀತುಪಡಿಸಿದ್ದೇವೆ. ಆಗ ಬಿಜೆಪಿ ನಾಯಕರು ಅದನ್ನು ಸಹಿಸಲಿಲ್ಲ. ಈಗ ನನ್ನ ಸರ್ಕಾರವನ್ನು ಅಸ್ಥಿರಗೊಳಿಸುವ ಮೂಲಕ ರಾಜ್ಯದ ಜನರಿಗೆ ದ್ರೋಹ ಬಗೆದರು. ರಾಜ್ಯವು ಹೊಸ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಆತಂಕ ಬಿಜೆಪಿಗೆ ಇದೆ. 15 ತಿಂಗಳಲ್ಲಿ ನಾವು ಮೂರು ಲಕ್ಷ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಎರಡನೇ ಹಂತದಲ್ಲಿ ಏಳೂವರೆ ರೈತರ ಸಾಲವನ್ನು ಮನ್ನಾ ಮಾಡುವ ಪ್ರಕ್ರಿಯೆ ನಡೆದಿತ್ತು ಎಂದು ಕಮಲ್ ನಾಥ್ ಹೇಳಿದ್ದರು.

ಮಧ್ಯಪ್ರದೇಶದಲ್ಲಿ ಪ್ರಸ್ತುತ 24 ಸ್ಥಾನಗಳು ಖಾಲಿ ಇವೆ. ಈ ಎಲ್ಲಾ ಸ್ಥಾನಗಳು 6 ತಿಂಗಳಲ್ಲಿ ಉಪಚುನಾವಣೆ ನಡೆಸಲಿವೆ. ಬಿಜೆಪಿ ಸರ್ಕಾರ ರಚನೆಯಾದರೆ, ಸರ್ಕಾರವನ್ನು ಉಳಿಸಲು ಉಪಚುನಾವಣೆಯಲ್ಲಿ ಕನಿಷ್ಠ 9 ಸ್ಥಾನಗಳನ್ನು ಗೆಲ್ಲಲೇ ಬೇಕಾಗುತ್ತದೆ.

104 ಮ್ಯಾಜಿಕ್ ನಂಬರ್:
ಮಧ್ಯಪ್ರದೇಶದ ಇಬ್ಬರು ಶಾಸಕರ ಮರಣದ ನಂತರ ಒಟ್ಟು ಸ್ಥಾನಗಳ ಸಂಖ್ಯೆ 228ಕ್ಕೆ ಇಳಿದಿದೆ. ಜೊತೆಗೆ ಈಗ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದ 22 ಶಾಸಕ ರಾಜೀನಾಮೆ ನೀಡಿದ್ದಾರೆ. ಹೀಗಾಗಿ 206ಕ್ಕೆ ಇಳಿಕೆ ಕಂಡಿದೆ. ಈ ಸಂದರ್ಭದಲ್ಲಿ ಬಹುಮತಕ್ಕೆ 104 ಸ್ಥಾನಗಳ ಅಗತ್ಯವಿದೆ. ಬಿಜೆಪಿ 107 ಸ್ಥಾನಗಳನ್ನು ಹೊಂದಿದೆ. ಇತ್ತ ಕಾಂಗ್ರೆಸ್ 99 (ಬಹುಮತಕ್ಕಿಂತ 5 ಕಡಿಮೆ) ಸ್ಥಾನಗಳನ್ನು ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *