ಗಲ್ಲು ವಿಧಿಸುವ ಪ್ರಕ್ರಿಯೆ ಹೇಗಿತ್ತು? ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?

Public TV
3 Min Read

ನವದೆಹಲಿ: ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವ ಮೂಲಕ ಕೋಟ್ಯಂತರ ಜನರ ಅಭಿಲಾಶೆ ನೆರವೇರಿದೆ. ಸೂರ್ಯ ಹುಟ್ಟೋ ಮೊದಲೇ ಕೀಚಕರ ವಧೆಯಾಗಿದೆ. 7 ವರ್ಷಗಳ ಬಳಿಕ ನಿರ್ಭಯಾ ಹಂತಕರಿಗೆ ನೇಣು ಕುಣಿಕೆ ಬಿದ್ದಿದೆ. ಒಟ್ಟೊಟ್ಟಿಗೆ ಮಾಡಿದ ಪಾಪಕ್ಕೆ ನಾಲ್ವರು ಒಟ್ಟಿಗೆ ಶಿಕ್ಷೆ ಅನುಭವಿಸಿದ್ದಾರೆ.

ಮೊದಲೇ ನಿಗದಿ ಆಗಿದ್ದಂತೆ ಮುಂಜಾನೆ 5.30ಕ್ಕೆ ಸರಿಯಾಗಿ ತಿಹಾರ್ ಜೈಲಿನಲ್ಲಿ ಪಾತಕಿಗಳಾದ ಪವನ್ ಗುಪ್ತಾ, ವಿನಯ್ ಶರ್ಮಾ, ಮುಖೇಶ್ ಸಿಂಗ್ ಹಾಗೂ ಅಕ್ಷಯ್ ಸಿಂಗ್‍ರನ್ನ ವದಾ ಸ್ಥಳಕ್ಕೆ ಕರೆತಂದು ಮುಖಕ್ಕೆ ಕಪ್ಪು ಬಟ್ಟೆ ಹಾಕಿ, ನೇಣುಗಂಬಕ್ಕೆ ಏರಿಸಲಾಯಿತು. ಕುರ್ತಾ-ಪೈಜಾಮ ಧಾರಿಯಾಗಿದ್ದ ಕೀಚಕರ ವಧೆಯಾಯ್ತು. ಬೆಳಗ್ಗೆ 6.00 ಗಂಟೆ ಸುಮಾರಿಗೆ ಪಾಪಿಗಳು ಸತ್ತಿರುವುದನ್ನು ಜೈಲಾಧಿಕಾರಿಗಳು ದೃಢಪಡಿಸಿದರು.

ಸದ್ಯ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಸಂಬಂಧಿಕರಿಗೆ ಮೃತದೇಹ ನೀಡುವುದು ಅನುಮಾನವಾಗಿದೆ. ಕಾನೂನು ಸುವ್ಯವಸ್ಥೆಯ ಸಲುವಾಗಿ ಸಾಮೂಹಿಕ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಗಳಿವೆ.

ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?
22 ವರ್ಷದ ಪವನ್ ಗುಪ್ತಾ ಬಸ್ ಕ್ಲೀನರ್ ಆಗಿದ್ದು, ಅರ್ಧಕ್ಕೆ ಶಾಲೆಯಿಂದ ಡ್ರಾಪ್‍ಔಟ್ ಆಗಿದ್ದನು. ಹಣ್ಣಿನ ವ್ಯಾಪಾರಿ ಹಾಗೂ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಬಿಕಾಂ ಪದವಿದರನಾದ ವಿನಯ್ ಶರ್ಮಾ(23) ಜಿಮ್ ಇನ್‍ಸ್ಟ್ರಕ್ಟರ್ ಆಗಿದ್ದನು. ಅಲ್ಲದೆ ಐಎಎಫ್ ಕ್ಲರ್ಕ್ ಪರೀಕ್ಷೆಗೆ ಕೋರ್ಟ್ ಅನುಮತಿ ಕೋರಿದ್ದನು. ಇನ್ನು ಮುಖೇಶ್ ಸಿಂಗ್(29) ನಿರುದ್ಯೋಗಿ ಆಗಿದ್ದು, ಆತನ ಸಹೋದರ ರಾಮ್‍ಸಿಂಗ್ ಬಸ್ ಚಾಲಕನಾಗಿದ್ದನು. ಆತ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದನು. ವಿವಾಹಿತನಾಗಿರುವ ಅಕ್ಷಯ್ ಸಿಂಗ್(31) ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದನು.

ಗಲ್ಲು ವಿಧಿಸುವ ದಿನ ಪ್ರಕ್ರಿಯೆ ಹೇಗಿರುತ್ತೆ?
1. ಮರಣದಂಡನೆ ವಿಧಿಸುವ ದಿನ ಜೈಲು ಎಸ್‍ಪಿ, ಡಿಎಸ್‍ಪಿ ಕೈದಿ ಇರುವ ಸೆಲ್‍ಗೆ ಹೋಗಿ ಈತನೇ ಮರಣದಂಡನೆಗೆ ಗುರಿಯಾಗಿರುವ ಕೈದಿ ಎಂದು ಖಚಿತಪಡಿಸಿಕೊಳ್ಳಬೇಕು.
2. ಕೈದಿ ಎದುರು ಮರಣದಂಡನೆ ಜಾರಿ ಆದೇಶ ಪ್ರತಿಯನ್ನು ಓದಬೇಕು.
3. ಇದಾದ ತರುವಾಯ ಕೈದಿಯಿಂದ ದಾಖಲೆಗಳಿಗೆ ಸಹಿ ಪಡೆದುಕೊಳ್ಳಬೇಕು.
4. ಕೈದಿಯ 2 ಕಾಲುಗಳನ್ನು ಕಬ್ಬಿಣದ ಸಂಕೋಲೆಯಿಂದ ಬಂಧಿಸಿದ್ದಲ್ಲಿ ಅದನ್ನು ತೆಗೆಯಬೇಕು.
5. ಕೈದಿಯನ್ನು ಗಲ್ಲು ಪೀಠದ ಕಡೆಗೆ ಕರೆದೊಯ್ಯುವ ಹೊಣೆ ಡಿಎಸ್‍ಪಿಯದ್ದು.
6. ಕೈದಿಗೆ ಜೈಲಿನ ಹೆಡ್ ವಾರ್ಡರ್ ಮತ್ತು ಆರು ಮಂದಿ ವಾರ್ಡರ್ ಕಾವಲು
7. ವಾರ್ಡರ್ ಗಳಲ್ಲಿ ಇಬ್ಬರು ಕೈದಿಯ ಹಿಂಭಾಗದಲ್ಲೂ, ಇಬ್ಬರು ಮುಂಭಾಗದಲ್ಲೂ. ಉಳಿದಿಬ್ಬರು ಕೈದಿಯ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ವಧಾಪೀಠದ ಬಳಿಗೆ ಕರೆದುಕೊಂಡು ಬರುತ್ತಾರೆ.
8. ಕೈದಿಯನ್ನು ನಿಖರವಾಗಿ ನೇಣಿನ ಕೆಳಗೆ ನಿಲ್ಲಿಸುತ್ತಾರೆ.
9. ಗಲ್ಲಿಗೂ ಮೊದಲು ಕೊನೆಯದಾಗಿ ಕೈದಿಗೆ ಮರಣದಂಡನೆ ಜಾರಿ ಆದೇಶವನ್ನು ಓದಿ ಹೇಳಲಾಗುತ್ತದೆ.
10. ನಂತರ ಕೈದಿಯ ಎರಡೂ ಕಾಲುಗಳನ್ನು ಬಿಗಿಯಾಗಿ ಕಟ್ಟಿ ಆತನ ತಲೆಗೆ ಕಪ್ಪು ಬಣ್ಣದ ಬಟ್ಟೆ ಹಾಕಲಾಗುತ್ತದೆ.
11. ಕೈದಿ ಕುತ್ತಿಗೆಗೆ ನೇಣು ಹಗ್ಗವನ್ನು ಇಳಿಸಲಾಗುತ್ತದೆ
12. ಈ ನೇಣು ಹಗ್ಗ ಕುತ್ತಿಗೆಯ ಮಧ್ಯ ಭಾಗದ 1.5 ಇಂಚು ಎಡ ಅಥವಾ ಬಲ ಭಾಗಕ್ಕೆ ವಾಲಿರಬೇಕು.
13. ಈ ಪ್ರಕ್ರಿಯೆ ಮುಗಿದ ಬಳಿಕ ಇಬ್ಬರೂ ವಾರ್ಡರ್ ಗಳು ಕೈದಿಯನ್ನು ವಧಾ ಸ್ಥಳದಲ್ಲಿ ಬಿಟ್ಟು ತೆರಳುತ್ತಾರೆ.
14. ಎಸ್‍ಪಿ ಸಿಗ್ನಲ್ ಕೊಟ್ಟ ನಂತರ ವಧಾಕಾರ (ಹ್ಯಾಂಗ್ ಮ್ಯಾನ್) ಗಲ್ಲು ಬಿಗಿಗೊಳಿಸುತ್ತಾರೆ.
15. ಗಲ್ಲು ಶಿಕ್ಷೆ ವಿಧಿಸಿದ 30 ನಿಮಿಷದವರೆಗೂ ದೇಹವನ್ನು ಮೇಲೆತ್ತುವಂತಿಲ್ಲ
16. ಜೈಲಿನ ವೈದ್ಯಾಧಿಕಾರಿ ಪ್ರಾಣ ಹೋಗಿದೆಯೆಂದು ಧೃಡಪಡಿಸಿದ ನಂತರ ದೇಹ ಮೇಲಕ್ಕೆತ್ತಲಾಗುತ್ತದೆ
17. ಕೈದಿಯ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
18. ಒಂದು ವೇಳೆ ಕೈದಿಯ ಕುಟುಂಬಸ್ಥರು ಶವವನ್ನು ತೆಗೆದುಕೊಳ್ಳದೇ ಇದ್ದಲ್ಲಿ ಆಗ ಜೈಲಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *