2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಭ್ಯರ್ಥಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

Public TV
2 Min Read

ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿಯ 362 ಹುದ್ದೆ ರದ್ದು ಮಾಡಿದ್ದ ಸರ್ಕಾರ ಈಗ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ನೇಮಕಾತಿ ಪ್ರಕ್ರಿಯೆಯನ್ನೆ ರದ್ದು ಮಾಡಿರುವ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಹೈಕೋರ್ಟಿಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾಗಿದೆ. ಸ್ವತಃ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಈ ವಿಷಯವನ್ನ ವಿಧಾನ ಪರಿಷತ್ ನಲ್ಲಿ ಸ್ಪಷ್ಟಪಡಿಸಿದ್ರು.

ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330 ಅಡಿ ಸದಸ್ಯರಾದ ಪಿ.ಆರ್ ರಮೇಶ್, ಬಸವರಾಜ್ ಹೊರಟ್ಟಿ, ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಅಪ್ಪಾಜಿಗೌಡ, ಚೌಡರೆಡ್ಡಿ ತೂಪಲ್ಲಿ 2011 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನ 362 ಹುದ್ದೆಯ ಅಕ್ರಮದ ಬಗ್ಗೆ ಚರ್ಚೆ ವಿಷಯ ಪ್ರಸ್ತಾಪ ಮಾಡಿದ್ರು. ವಿಷಯ ಪ್ರಸ್ತಾಪಕ್ಕೆ ಉತ್ತರ ಕೊಟ್ಟ ಸಚಿವ ಮಾಧುಸ್ವಾಮಿ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪುನರ್ ಪರಿಶೀಲನಾ ಅರ್ಜಿ ಹಾಕೋದಾಗಿ ತಿಳಿಸಿದರು. ಅಭ್ಯರ್ಥಿಗಳ ಪರ ಮಾತನಾಡಿದ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ, ನೇಮಕಾತಿಯಲ್ಲಿ ಅಕ್ರಮ ಆಗಿದೆ ಅಂತೀರಾ. ಆದ್ರೆ ಯಾವುದೇ ದಾಖಲಾತಿ ಸಿಕ್ಕಿಲ್ಲ. ನೇಮಕಾತಿ ರದ್ದು ಮಾಡಿರೋದರಿಂದ ಈಗಾಗಲೇ ನೇಮಕವಾಗಿದ್ದ ಅಭ್ಯರ್ಥಿಗಳಿಗೆ ಭವಿಷ್ಯ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಾಮಾಣಿಕವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಬಡವರು ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಅಭ್ಯರ್ಥಿಗಳಿಗೆ ಅನ್ಯಾಯ ಆಗೋದು ಬೇಡ. ಸರ್ಕಾರ ಈ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಬೇಕು ಅಂತ ಮನವಿ ಮಾಡಿದ್ರು. ಮತ್ತೊಬ್ಬ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ ಸಿಐಡಿ, ಕೇವಲ ಮಧ್ಯಂತರ ವರದಿ ನೀಡಿದೆ. ಮಧ್ಯಂತರ ವರದಿ ಆಧಾರದ ಮೇಲೆ ನೇಮಕಾತಿಯನ್ನ ರದ್ದು ಮಾಡಿರೋದು ಸರಿಯಲ್ಲ. ಯಾರೋ ದೂರು ಕೊಟ್ರು ಅಂತ ನೇಮಕಾತಿ ರದ್ದು ಮಾಡೋದು ಸರಿಯಲ್ಲ. ಯಾರೋ 46 ಅಭ್ಯರ್ಥಿಗಳು ತಪ್ಪು ಮಾಡಿದ್ರು ಅಂತ 300 ಅಭ್ಯರ್ಥಿಗಳ ಭವಿಷ್ಯ ಹಾಳು ಮಾಡ್ತೀರಾ. ಇದು ಸರಿಯಾದ ವರ್ತನೆ ಅಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು. ನೇಮಕಾತಿ ರದ್ದಾಗಿರೋದಕ್ಕೆ ಕೆಲವರು ಹುಚ್ಚರಾಗುತ್ತಿದ್ದಾರೆ. ಕುಟುಂಬಗಳಲ್ಲಿ ಬಿರುಕು ಬಿಟ್ಟಿದೆ. ಎಲ್ಲರ ಬಾಯಿಗೆ ಮಣ್ಣು ಬಿದ್ದಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಬೇಕು ಅಂತ ಮನವಿ ಮಾಡಿದರು.

ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಮಾಧುಸ್ವಾಮಿ, ರದ್ದಾಗಿರುವ ನೇಮಕಾತಿ ಪ್ರಕ್ರಿಯೆಯನ್ನ ವಾಪಸ್ ಪಡೆಯಲು ಸಾಧ್ಯವಿಲ್ಲ. ಹೈಕೋರ್ಟ್, ಸುಪ್ರೀಂಕೋರ್ಟ್ ನಲ್ಲಿ ಚರ್ಚೆ ಆಗಿಯೇ ಕೋರ್ಟ್ ತೀರ್ಪಿನಂತೆ ನೇಮಕಾತಿ ರದ್ದು ಮಾಡಲಾಗಿದೆ. ಸರ್ಕಾರ ಅಭ್ಯರ್ಥಿಗಳಿಗೆ ಪರವಾಗಿದೆ. ಮಾನವೀಯತೆ ದೃಷ್ಟಿಯಿಂದ ಹೈಕೋರ್ಟ್ ನಲ್ಲಿ ಸರ್ಕಾರವೇ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುತ್ತೆ. ಹೈಕೋರ್ಟ್ ಇದನ್ನ ಇದನ್ನ ಮಾನ್ಯ ಮಾಡುತ್ತಾ ಗೊತ್ತಿಲ್ಲ. ಆದರೆ ಅಭ್ಯರ್ಥಿಗಳಿಗೆ ಪರ ನಮ್ಮ ಪ್ರಯತ್ನ ನಾವು ಮಾಡ್ತೀವಿ.ಸರ್ಕಾರಕ್ಕೆ ಉಳಿದಿರೋದು ಪುನರ್ ಪರಿಶೀಲನೆ ಅರ್ಜಿ ಹಾಕೋದು ಮಾತ್ರ. ಅರ್ಜಿ ಹಾಕೋ ಕೆಲಸ ಮಾಡ್ತೋವಿ.ಅರ್ಜಿ ಸ್ವೀಕಾರ ಮಾಡೋ ಹೈಕೋರ್ಟ್ ಗೆ ಬಿಟ್ಟ ವಿಚಾರ ಅನ್ನೋ ಮೂಲಕ ಸರ್ಕಾರ ಅಭ್ಯರ್ಥಿಗಳ ಪರ ಇದೆ ಅಂತ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *